ಬೀಜಿಂಗ್(ಜು.20): ಕೊರೋನಾ ಉಗಮ ಸ್ಥಾನವಾದ ಚೀನಾದಲ್ಲಿ ಈಗ ಮಂಕಿ ಬಿ ವೈರಸ್ ಹಾವಳಿ ಆರಂಭವಾಗಿದ್ದು, ಮೊದಲ ಬಾರಿ ಇಲ್ಲಿ ಮಾನವರಿಗೆ ಸೋಂಕು ತಾಗಿದೆ. ಬೀಜಿಂಗ್ನ ಸರ್ಜನ್ ಒಬ್ಬರು ಮಂಕಿ ಬಿ ವೈರಸ್ಗೆ ಬಲಿ ಆಗಿದ್ದಾರೆ.
* ಮಂಕಿ ಬಿ ವೈರಸ್ಗೆ ಚೀನಾದಲ್ಲಿ ಮೊದಲ ಬಲಿ
* ಸತ್ತ ಮಂಗ ಕೊಯ್ದು ಸಂಶೋಧನೆ ಮಾಡುತ್ತಿದ್ದ
* ಆಗ ವೈರಾಣು ದೇಹದಲ್ಲಿ ಪ್ರವೇಶಿಸಿ ವೈದ್ಯ ಸಾವು
* ಕೊರೋನಾ ಬೆನ್ನಲ್ಲೇ ಚೀನಾದಲ್ಲಿ ಹೊಸ ಹಾವಳಿ
ಎರಡು ಸತ್ತ ಮಂಗಗಳನ್ನು ಕೊಯ್ದು 53 ವರ್ಷದ ಈ ವೈದ್ಯ ಪರೀಕ್ಷೆಗೆ ಒಳಪಡಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ವಾಂತಿ, 1 ತಿಂಗಳ ನಂತರ ಜ್ವರ ಹಾಗೂ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡವು. ಮೇ 27ರಂದು ಅವರು ನಿಧನ ಹೊಂದಿದರು ಎಂದು ತಡವಾಗಿ ಬೆಳಕಿಗೆ ಬಂದಿದೆ ಎಂದು ಚೀನಾ ಮಾಧ್ಯಮವೊಂದು ವರದಿ ಮಾಡಿದೆ.
ಇವರು ನಿಧನ ಹೊಂದಿದ ನಂತರ ಇವರ ರಕ್ತ, ಗಂಟಲು ದ್ರವ, ಪ್ಲಾಸ್ಮಾಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೋನಾ ಸೇರಿದಂತೆ ವಿವಿಧ ಪರೀಕ್ಷೆ ನೆನಗೆಟಿವ್ ಬಂದರೂ ಮಂಕಿ-ಬಿ ಪಾಸಿಟಿವ್ ಬಂದಿದೆ. ಆದರೆ ಇವರ ಸಂಪರ್ಕಕ್ಕೆ ಬಂದವರ ಪರೀಕ್ಷೆ ನೆಗೆಟಿವ್ ಬಂದಿದೆ.
ಆದರೂ ಚೀನಾದಲ್ಲಿ ಇದು ಮೊದಲ ಮಂಕಿ ಬಿ ಪ್ರಕರಣವಾಗಿದೆ. ಹರಡುವಿಕೆ ಹೇಗೆ?:
ಕೋತಿಗಳಲ್ಲಿನ ದೇಹದಲ್ಲಿನ ದ್ರವದ ಅಂಶಗಳು ಸ್ರವಿಕೆಯಾಗಿ ಅದು ಮಾನವರಿಗೆ ಹರಡುತ್ತದೆ. ನರ ವ್ಯವಸ್ಥೆಯ ಒಳಗೆ ವೈರಾಣು ಪ್ರವೇಶಿಸುತ್ತದೆ. ಸಾವಿನ ಪ್ರಮಾಣ ಶೇ.70ರಿಂದ 80ರಷ್ಟುಇರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಆದರೆ ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆ ಕಮ್ಮಿ ಎನ್ನುತ್ತಾರೆ.
1932ರಲ್ಲಿ ಇದು ಮೊದಲ ಬಾರಿ ಕಂಡುಬಂದಿತ್ತು. ಆದರೆ ಆಗ ಮಂಗಗಳು ಕಚ್ಚಿದ್ದರಿಂದ ಹಾಗೂ ಕಚ್ಚಿದ್ದರಿಂದ ಸೋಂಕು ತಾಗಿತ್ತು. 24 ಜನ ಅಸುನೀಗಿದ್ದರು.