ಮಂಗಳೂರು: ಧರ್ಮಸ್ಥಳದ ಸುತ್ತಾ ಮುತ್ತಾ ಶವಗಳನ್ನು ಹೂತಿಟ್ಟ ಆರೋಪ ಸಂಬಂಧ ಇದೀಗ ಎಸ್‌ಐಟಿ ತನಿಖೆ ನಿರ್ಣಾಯಕ ಹಂತಕ್ಕೆ ತಲುಪುತ್ತಿದ್ದ ಹಾಗೇ ಸಾಕ್ಷ್ಯಿ ದೂರುದಾರ ಅಧಿಕಾರಿಗಳಿಗೆ ಕನ್ಯಾಡಿ ಬಳಿ ಹೊಸ ಜಾಗವನ್ನು ಗುರುವಾರ ತೋರಿಸಿದ್ದು, ಅಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ನೇತ್ರಾವತಿ ನದಿ ಪಕ್ಕದಲ್ಲಿರುವ ಈ ಜಾಗಕ್ಕೆ ಖಾಸಗಿ ಅಡಿಕೆ ತೋಟವೊಂದರ ಮೂಲಕ ಸಾಗಬೇಕಿದೆ.
ಉಜಿರೆ– ಧರ್ಮಸ್ಥಳ ರಸ್ತೆಯಿಂದ ಸುಮಾರು 1 ಕಿ.ಮೀ ದೂರವನ್ನು ಕಿರಿದಾದ ರಸ್ತೆಯಲ್ಲಿ ಕ್ರಮಿಸಿದ ಬಳಿಕ ಈ ಜಾಗ ಸಿಗುತ್ತದೆ. ಈ ಜಾಗ ಸ್ನಾನಘಟ್ಟದ ಪಕ್ಕದಲ್ಲಿ ಹರಿಯುವ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ಈ ಜಾಗ ಇದೆ. ಎಸ್‌ಐಟಿ ಸಿಬ್ಬಂದಿ ಸಾಕ್ಷಿ ದೂರುದಾರ ಜೊತೆಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಾಗವನ್ನು ತಲುಪಿದರು.
ಎಂದಿನಂತೆ ಇಂದು ಕೂಡಾ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್‌ಐಟಿ ಎಸ್‌ಪಿ. ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಹಾಗೂ ನೆಲ ಅಗೆಯುವ ಕಾರ್ಮಿಕರು ದೂರುದಾರನೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ನೆಲವನ್ನು ಅಗೆಯುವ ಯಂತ್ರವನ್ನೂ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಈ ಜಾಗಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ದೂರುದಾರ ಧರ್ಮಸ್ಥಳದ ಸುತ್ತಾ ಮುತ್ತಾ ಹಲವು ಶವಗಳನ್ನು ಹೂತಿಟ್ಟ ಆರೋಪ ಸಂಬಂಧ ಆತ ಗುರುತಿಸಿದ 17 ಪಾಯಿಂಟ್‌ನಲ್ಲಿ ಈಗಾಗಲೇ ಶೋಧ ಕಾರ್ಯ ನಡೆಸಿದ್ದಾರೆ. ಕಳೇಬರಹ ಉತ್ಖನನ ಸಂದರ್ಭದಲ್ಲಿ 6ನೇ ಪಾಯಿಂಟ್‌ನಲ್ಲಿ ಬಿಟ್ಟರೇ ಬೇರಲ್ಲೂ ಮೂಳೆಗಳು ಪತ್ತೆಯಾಗಿಲ್ಲ.