ನ್ಯೂಯಾರ್ಕ್: ಮೊನ್ನೆಯಿಂದ ರಷ್ಯಾ ಮೇಲೆ ಕೆಂಡ ಕಾರಿದ್ದು ಅಲ್ಲದೆ, ರಷ್ಯಾ ಜೊತೆಗೆ ವ್ಯಾಪಾರ ನಡೆಸುವ ಭಾರತವೂ ಮಹಾಪರಾಧ ಮಾಡುತ್ತಿದೆ ಎನ್ನುವಂತೆ ಆಡುತ್ತಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಾವೇ ರಷ್ಯಾ ಪ್ರವಾಸ ಮಾಡುತ್ತಿದ್ದಾರೆ.
ತನಗೊಂದು ರೂಲ್ಸ್ ಬೇರೆಯವರಿಗೊಂದು ರೂಲ್ಸ್ ಎಂಬಂತಿದೆ ಅಮೆರಿಕಾ ಅಧ್ಯಕ್ಷರ ನಡವಳಿಕೆ. ರಷ್ಯಾ ಜೊತೆಗೆ ಭಾರತ ತೈಲ ವ್ಯಾಪಾರ ನಡೆಸಬಾರದು. ಇದರಿಂದ ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾಗೆ ಹಣ ಸಹಾಯ ಮಾಡಿದಂತೆ ಎಂದು ಬೊಬ್ಬಿರಿಯುತ್ತಿರುವ ಅಮೆರಿಕಾ ತಾನು ಮಾತ್ರ ಆ ದೇಶದ ಜೊತೆಗಿನ ವ್ಯಾಪಾರ ಮುಂದುವರಿಸಿದೆ. ತನ್ನ ಮಾತು ಕೇಳದ ಭಾರತ ಮತ್ತು ರಷ್ಯಾದ್ದು ಸತ್ತ ಅರ್ಥಿಕತೆ ಎಂದು ನಿಂದಿಸಿದ್ದರು.
ಇಷ್ಟೆಲ್ಲಾ ಆದ ಮೇಲೆ ಈಗ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿಗೆ ಮುಂದಾಗಿದ್ದಾರೆ. ಮಾಸ್ಕೋದಲ್ಲಿ ಟ್ರಂಪ್ ವಿಶೇಷ ರಾಯಭಾರಿ ಮತ್ತು ಪುಟಿನ್ ನಡುವೆ ಮಾತುಕತೆ ನಡೆದಿದೆ. ಇತ್ತ ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಕಿ ಜೊತೆಗೆ ಮಾತನಾಡಿದ್ದಾರೆ. ಹೀಗಾಗಿ ಈಗ ಉಕ್ರೇನ್ ಮತ್ತು ರಷ್ಯಾ ಅಧ್ಯಕ್ಷರನ್ನು ಜೊತೆಗೆ ಕೂರಿಸಿ ಸಂಧಾನ ಮಾತುಕತೆ ನಡೆಸಲು ತಾವೇ ನೇತೃತ್ವ ವಹಿಸಲು ಮುಂದಾಗಿದ್ದಾರೆ. ಆದರೆ ಪುಟಿನ್ ಮತ್ತು ಟ್ರಂಪ್ ಯಾವಾಗ ಭೇಟಿಯಾಗುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಒಂದು ವೇಳೆ ಮಾತುಕತೆಗೆ ಒಪ್ಪದೇ ಹೋದರೆ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಟ್ರಂಪ್ ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾದ ಬಳಿಕ ಪುಟಿನ್ ಜೊತೆಗೆ ಇದು ಮೊದಲ ಭೇಟಿಯಾಗಿರಲಿದೆ.