ಮತ್ತೆ ಭೂಕಂಪ : 8 ಸಾವು, 290ಕ್ಕೂ ಹೆಚ್ಚು ಮಂದಿಗೆ ಗಾಯ!

ಬುಧವಾರ, 22 ಫೆಬ್ರವರಿ 2023 (07:46 IST)
ಅಂಕಾರಾ : ಟರ್ಕಿ-ಸಿರಿಯಾ ಗಡಿಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿದೆ. ವರದಿಯ ಪ್ರಕಾರ ಈ ಭೂಕಂಪದ ತೀವ್ರತೆಯು 6.4ರಷ್ಟಿತ್ತು. ಇದರಿಂದಾಗಿ 294 ಜನರು ಗಾಯಗೊಂಡಿದ್ದು, ಅವರ ಪೈಕಿ 18 ಜನರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಸಿರಿಯಾದ ಹಮಾ ಮತ್ತು ಟಾರ್ಟಸ್ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದ ಸಮಯದಲ್ಲಿ ಭಯಭೀತರಾಗಿ ಓರ್ವ ಮಹಿಳೆ ಮತ್ತು ಬಾಲಕಿ ಸಾವನ್ನಪ್ಪಿದ್ದಾರೆ. 

ಭೂಕಂಪದ ಕೇಂದ್ರಬಿಂದು ಸಿರಿಯಾದ ಗಡಿಯುದ್ದಕ್ಕೂ ಇರುವ ಟರ್ಕಿಯ ಹಟೇ ಪ್ರಾಂತ್ಯದ ಡೆಫ್ನೆ ಪಟ್ಟಣದಲ್ಲಿದೆ. ಜೋಡಾನ್, ಸೈಪ್ರಸ್, ಇಸ್ರೇಲ್, ಲೆಬನಾನ್ ಮತ್ತು ದೂರದ ಈಜಿಪ್ಟ್ ನಲ್ಲೂ ಈ ಭೂಕಂಪದ ಅನುಭವವಾಗಿತ್ತು. 

ಫೆಬ್ರವರಿ 6ರಂದು 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾ ದೇಶವನ್ನು ಕಂಗೆಡಿಸಿತ್ತು. ಈ ಸಂದರ್ಭದಲ್ಲಿ ಟರ್ಕಿಯ ಹಟೇ ಪ್ರಾಂತ್ಯವು ಅತ್ಯಂತ ಹೆಚ್ಚು ಹಾನಿಗೊಳಗಾಗಿ, ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದವು.

ಎರಡನೇ ಭೂಕಂಪವು ಮತ್ತಷ್ಟು ಹಾನಿಯನ್ನುಂಟು ಮಾಡಿತ್ತು. ಹಟೇ ಪ್ರಾಂತ್ಯದಲ್ಲಿದ್ದ ರಾಜ್ಯಪಾಲರ ಕಚೇರಿಯೂ ಹಾನಿಗೊಳಗಾಗಿದೆ ಎಂದು ವರದಿಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ