ಇಸ್ರೇಲ್: ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ನಡುವಿನ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ದೇಶಗಳ ನಡುವಿನ ಘರ್ಷನೆ ಇದೀಗ ಅಕ್ಕ ಪಕ್ಕದ ರಾಷ್ಟ್ರಗಳಿಗೂ ಸಂಘರ್ಷ ವ್ಯಾಪಿಸಿದೆ. ಇದೀಗ ಇಸ್ರೇಲ್ ಮತ್ತು ಲೆಬನಾನ್ ಮೂಲದ ಉಗ್ರಗಾಮಿ ಸಂಘಟನೆ ಹಿಜ್ಬುಲ್ಲಾ ನಡುವೆ ಸಂಘರ್ಷ ಆರಂಭವಾಗಿದೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ, ಹಿಜ್ಬುಲ್ಲಾ 300ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಸ್ರೇಲ್ ಮೇಲೆ ಉಡಾಯಿಸಿದೆ. ಇಸ್ರೇಲ್ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡಿದ್ದು 320ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿದೆ ಎಂದು ಹಿಜ್ಬುಲ್ಲಾ ಹೇಳಿದೆ.
ಹಿಜ್ಬುಲ್ಲಾ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ಬಳಿಕ ಇಸ್ರೇಲ್ ಸೈನ್ಯವು ಲೆಬನಾನ್ ಮೇಲೆ ದಾಳಿ ಶುರು ಮಾಡಿತ್ತು, ಇಸ್ರೇಲ್ ರಕ್ಷಣಾ ಪಡೆಗಳು ಭಾನುವಾರ ದಾಳಿಯ ಪ್ರಮಾಣವನ್ನು ಹೆಚ್ಚಿಸಿತು. ಹಿಜ್ಬುಲ್ಲಾ ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದಲ್ಲಿ ಆಕ್ರಮಣ ಮಾಡಲು ಸಿದ್ಧತೆ ಆರಂಭಿಸಿದೆ ಎಂದು ಇಸ್ರೇಲ್ ಹೇಳಿದೆ.
ಹಿಜ್ಬುಲ್ಲಾದ ದಾಳಿಯನ್ನು ತಡೆಯಲು ಇಸ್ರೇಲ್ ವಾಯುಪಡೆಯ ಫೈಟರ್ ಜೆಟ್‌ಗಳನ್ನು ನಿಯೋಜನೆ ಮಾಡಲಾಗಿದೆ. ಇಸ್ರೇಲ್ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ದಿನದಿಂದ ದಿನಕ್ಕೆ ಸಂಘರ್ಷ ಅಕ್ಕಪಕ್ಕದ ಪ್ರದೇಶಗಳಿಗೆ ವ್ಯಾಪಿಸುತ್ತಿದ್ದು, ಯುದ್ಧ ಶುರುವಾಗುವ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕಳೆದ ತಿಂಗಳು ತನ್ನ ಮಿಲಿಟರಿ ಕಮಾಂಡರ್ ಫುವಾಡ್ ಶುಕ್ರ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಹಿಜ್ಬುಲ್ಲಾ ಮತ್ತು ಇರಾನ್ ಪ್ರತಿಜ್ಞೆ ಮಾಡಿದೆ. ತನ್ನ ಕಮಾಂಡರ್ ಮೇಲೆ ದಾಳಿ ಮಾಡಿದ್ದನ್ನು ನೇರ ಪ್ರಚೋದನೆ ಮತ್ತು ಯುದ್ಧದ ಕ್ರಿಯೆ ಎಂದು ಕರೆದಿದೆ.
ಶುಕ್ರ್ ಹತ್ಯೆಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಸಂಖ್ಯೆ ಡ್ರೋನ್‌ಗಳೊಂದಿಗೆ ವೈಮಾನಿಕ ದಾಳಿ ಪ್ರಾರಂಭಿಸಲಾಗಿದೆ ಎಂದು ಹಿಜ್ಬುಲ್ಲಾ ಹೇಳಿದೆ. ಇಸ್ರೇಲ್‌ನ ಹಲವು ಸ್ಥಾನಗಳು, ಬ್ಯಾರಕ್‌ಗಳು ಮತ್ತು ಐರನ್ ಡೋಮ್‌ಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಸಂಖ್ಯೆಯ ರಾಕೆಟ್‌ಗಳೊಂದಿಗೆ ದಾಳಿ ಆರಂಭಿಸಿರುವುದಾಗಿ ತಿಳಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಭದ್ರತಾ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಮುಂದಿನ 48 ಗಂಟೆಗಳ ಕಾಲ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.