ನವದೆಹಲಿ: ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಇಂದು ಯುದ್ಧ ಪೀಡಿತ ಉಕ್ರೇನ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಮೋದಿ ರೈಲಿನಲ್ಲಿ ಪ್ರಯಾಣಿಸಲಿದ್ದು, ಈ ರೈಲಿನ ವಿಶೇಷತೆ ಬಗ್ಗೆ ತಿಳಿದುಕೊಳ್ಳಿ.
ಉಕ್ರೇನ್ ದೇಶಕ್ಕೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಈಗ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧದ ವಾತಾವರಣವಿದ್ದು ಈ ಹಿನ್ನಲೆಯಲ್ಲಿ ವಿಮಾನ ಹಾರಾಟವಾಗುತ್ತಿಲ್ಲ. ಹೀಗಾಗಿ ಮೋದಿ ರೈಲಿನ ಮೂಲಕವೇ ಪ್ರಯಾಣ ಮಾಡಲಿದ್ದಾರೆ.
ಮೋದಿ ಸುಮಾರು 20 ಗಂಟೆಗಳ ಕಾಲ ರೈಲು ಪ್ರಯಾಣ ಮಾಡಬೇಕಾಗುತ್ತದೆ. ಈ ರೈಲು ಸಾಮಾನ್ಯ ರೈಲಿನಂತಲ್ಲ. ಇಲ್ಲಿ ಹೋಟೆಲ್ ನಿಂದ ಹಿಡಿದು ಎಲ್ಲಾ ರೀತಿಯ ಸೌಲಭ್ಯಗಳಿವೆ. ಗಣ್ಯ ವ್ಯಕ್ತಿಗಳ ಪ್ರಯಾಣಕ್ಕಾಗಿಯೇ ವಿಶೇಷ ಸೌಲಭ್ಯ ಮತ್ತು ಸುರಕ್ಷತೆಗಳಿರುವ ರೈಲು ಇದಾಗಿದೆ. ಈ ರೈಲಿನಲ್ಲಿ ಹೋಟೆಲ್, ಮೀಟಿಂಗ್ ನಡೆಸಲು ಟೇಬಲ್, ಟಿವಿ, ಮಲಗಲು ಸೋಫಾ ಸೌಲಭ್ಯಗಳಿವೆ. ಮೋದಿಗಿಂತ ಮೊದಲು ಅಮೆರಿಕಾ ಮತ್ತು ಫ್ರಾನ್ಸ್ ಅಧ್ಯಕ್ಷರು ಈ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತ ರಷ್ಯಾಗೆ ಬೆಂಬಲ ನೀಡಿದೆ ಎಂಬ ಆರೋಪಗಳಿತ್ತು. ಆದರೆ ಈಗ ಮೋದಿ ಉಕ್ರೇನ್ ಗೆ ಭೇಟಿ ನೀಡಿರುವುದರಿಂದ ಆ ಅಪವಾದಗಳು ತೊಡೆದು ಉಕ್ರೇನ್ ನೊಂದಿಗೂ ಉತ್ತಮ ಬಾಂಧವ್ಯ ವೃದ್ಧಿಯಾಗುವ ನಿರೀಕ್ಷೆಯಿದೆ.