ಇಸ್ಲಾಮಾಬಾದ್: ಭಾರತ ನಡೆಸಿದ ಕ್ಷಿಪಣಿ ದಾಳಿಗೆ ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿ ನ್ಯೂಕ್ಲಿಯರ್ ತಾಣಕ್ಕೆ ಹಾನಿಯಾಗಿದ್ದು ವಿಕಿರಣ ಸೋರಿಕೆಯಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳು ಎಂದು ಈಗ ಖಚಿತವಾಗಿದೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಇದನ್ನು ಖಚಿತಪಡಿಸಿದೆ. ಕಿರಾನಾ ಬೆಟ್ಟದಲ್ಲಿ ಪಾಕಿಸ್ತಾನದ ಪರಮಾಣು ತಾಣವಿದ್ದು, ಇದಕ್ಕೆ ಭಾರತ ದಾಳಿ ನಡೆಸಿದ ಕಾರಣ ಈಗ ವಿಕಿರಣ ಸೋರಿಕೆಯಾಗುತ್ತಿದೆ ಎಂದು ಸುದ್ದಿಯಾಗಿತ್ತು.
ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಮಾಡಿರುವ ವಿಶ್ವ ಸಂಸ್ಥೆಯ ಪರಮಾಣು ಕಾವಲುಗಾರ ಸಂಸ್ಥೆ ಅಂತಹ ವಿಕಿರಣ ಸೋರಿಕೆ ನಡೆದಿಲ್ಲ ಎಂದು ವರದಿ ನೀಡಿದೆ. ಭಾರತೀಯ ಸೇನೆ ಕೂಡಾ ನಾವು ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ದಾಳಿ ಮಾಡಿಲ್ಲ ಎಂದಿತ್ತು. ಹಾಗಿದ್ದರೂ ಕ್ಷಿಪಣಿ ದಾಳಿಯಲ್ಲಿ ಪರಮಾಣು ತಾಣಗಳಿಗೆ ಹಾನಿಯಾಗಿದೆ ಎಂದು ಸುದ್ದಿ ಹರಿದಾಡಿತ್ತು.
ಏರ್ ಮಾರ್ಷಲ್ ಭಾರ್ತಿ, ನಮಗೆ ಕಿರಾನಾ ಬೆಟ್ಟದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಅಡಗಿಸಿಟ್ಟಿದೆ ಎಂದು ಮಾಹಿತಿ ನೀಡಿದ್ದಕ್ಕೆ ಧನ್ಯವಾದ. ನಮಗೂ ಇದು ಗೊತ್ತಿರಲಿಲ್ಲ ಎಂದು ನಕ್ಕಿದ್ದರು.