ಉಕ್ರೇನ್ ರಾಜಧಾನಿ ಕೈವ್ನಲ್ಲಿ ತೀವ್ರಗೊಂಡ ರಷ್ಯಾ ದಾಳಿ. ಎಲ್ಲೆಲ್ಲೂ ಬೆಂಕಿಯ ಜ್ವಾಲೆ, ಹೊಗೆ ಏಳುತ್ತಿರುವ ವಿಡಿಯೋ ವೈರಲ್.
ಇದೇ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಪಡೆಗಳು ಕೈವ್ನಲ್ಲಿ ಭೀಕರ ದಾಳಿ ನಡೆಸಲು ಯತ್ನಿಸುತ್ತಿವೆ. ಇನ್ನೂ ಮುಕ್ತವಾಗಿ ಹೇಳಬೇಕು ಎಂದರೆ, ಈ ರಾತ್ರಿ ಕೈವ್ ಪಾಲಿಗೆ ಕಷ್ಟಕರವಾಗಲಿದೆ. ಈಗಾಗಲೇ ಉಕ್ರೇನ್ನ ಅನೇಕ ನಗರಗಳಲ್ಲಿ ದಾಳಿಯಾಗುತ್ತಿದೆ ಎಂದು ಹೇಳಿದ್ದಾರೆ.
ಯುರೋಪ್ನಲ್ಲೀಗ ಯುದ್ಧದ ಕಾರ್ಮೋಡ. ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ ಎರಡು ದಿನವೇ ಕಳೆದು ಹೋಯಿತು. ಉಕ್ರೇನ್ನಲ್ಲಿ ಎಲ್ಲಿ ನೋಡಿದರೂ ಸ್ಫೋಟದ ಶಬ್ದ, ಸಾವು-ನೋವು.
ಈ ಮಧ್ಯೆ ತಮ್ಮ ರಕ್ಷಣೆಗಾಗಿ ಕಷ್ಟಪಡುತ್ತಿರುವ ನಾಗರಿಕರು. ಉಕ್ರೇನ್ನ ಸುಮಾರು 211 ಸೇನಾ ಸೌಲಭ್ಯ ವ್ಯವಸ್ಥೆಯನ್ನು ನಾಶ ಮಾಡಿದ್ದಾಗಿ ರಷ್ಯ ಹೇಳಿಕೊಂಡಿದ್ದರೆ, ರಷ್ಯಾದ 1000ಕ್ಕೂ ಹೆಚ್ಚು ಸೈನಿಕರನ್ನು ಹೊಡೆದುರುಳಿಸಿದ್ದಾಗಿ ಉಕ್ರೇನ್ ಮಿಲಿಟರಿ ಹೇಳಿಕೊಂಡಿದೆ.
ಉಕ್ರೇನ್ನಲ್ಲಂತೂ ಕೇವಲ ಸೈನಿಕರಷ್ಟೇ ಅಲ್ಲ, ಅಲ್ಲಿನ ನಾಗರಿಕರೂ ಶಸ್ತ್ರಾಸ್ತ್ರ ಹಿಡಿದಿದ್ದಾರೆ. ದೇಶರಕ್ಷಣೆಗಾಗಿ ಧಾವಿಸುತ್ತಿದ್ದಾರೆ. ಇಂದು ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೈವ್ನಲ್ಲಿ ತಮ್ಮ ದಾಳಿಯ ತೀವ್ರತೆ ಹೆಚ್ಚಿಸಿವೆ.