ವಾಷಿಂಗ್ಟನ್ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಜೀವ ಬೆದರಿಕೆ ಒಡ್ಡಿರುವ ವೀಡಿಯೋ ರೆಕಾರ್ಡ್ ಪೋಸ್ಟ್ ಹಾಕಿದ್ದಕ್ಕೆ ಇರಾನ್ ಮುಖ್ಯ ನಾಯಕನಿಗೆ ಸಂಬಂಧಿಸಿದ ಟ್ವಿಟ್ಟರ್ ಖಾತೆಯನ್ನು ನಿಷೇಧಿಸಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.
ಎರಡು ವರ್ಷಗಳ ಹಿಂದೆ ಬಾಗ್ದಾದ್ನಲ್ಲಿ ಡೊನಾಲ್ಡ್ ಟ್ರಂಪ್ ಡ್ರೋನ್ ದಾಳಿಗೆ ಆದೇಶಿಸಿದ್ದರು. ಈ ವೇಳೆ ಇರಾನ್ನ ಉನ್ನತ ಕಮಾಂಡರ್ ಜನರಲ್ ಖಾಸಿಂ ಸೊಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಎಂಬಂತೆ ಮಾನವರಹಿತ ವಿಮಾನವನ್ನು ತೋರಿಸುವ ಆ್ಯನಿಮೇಟೆಡ್ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಇರಾನ್ ಮುಖ್ಯ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಖಾತೆಗಳು ವಿವಿಧ ಭಾಷೆಗಳಲ್ಲಿ ಸಕ್ರಿಯವಾಗಿವೆ. ಕಳೆದ ವರ್ಷವೂ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವ ಪೋಸ್ಟ್ ಹಾಕಿದ್ದಕ್ಕಾಗಿ ಟ್ವಿಟ್ಟರ್ನಿಂದ ಇದೇ ರೀತಿ ಒಂದು ಖಾತೆಯನ್ನು ಅಮಾನತು ಮಾಡಲಾಗಿತ್ತು.
ಖಮೇನಿ ಅಧಿಕೃತ ಖಾತೆಯಲ್ಲಿ ʻಸೇಡು ತೀರಿಸಿಕೊಳ್ಳುವುದು ನಿಶ್ಚಿತʼ ಎಂಬ ಸಾಲಿನೊಂದಿಗೆ ವೀಡಿಯೋ ಪೋಸ್ಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.