ಟ್ರಂಪ್- ಕಿಮ್ ಭೇಟಿ ; ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಕೊಂಡ ಕಿಮ್
ಬುಧವಾರ, 13 ಜೂನ್ 2018 (13:00 IST)
ಸಿಂಗಾಪುರ : ಸಿಂಗಾಪುರದಲ್ಲಿ ಮಂಗಳವಾರದಂದು ನಿಗದಿಯಾಗಿದ್ದ ಐತಿಹಾಸಿಕ ಶೃಂಗ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಭೇಟಿಯಾಗಿ ಮಾತುಕತೆ ನಡೆಸುವುದರ ಮೂಲಕ ಈ ಸಭೆ ಯಶಸ್ವಿಯಾಗಿದೆ.
ಈ ಸಭೆಯಲ್ಲಿ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಗೆ ನೀಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ. ಈ ಸಭೆಯಲ್ಲಿ ಈ ಎರಡು ದೇಶಗಳ ನಾಯಕರು ಒಪ್ಪಂದಕ್ಕೆ ಸಹಿ ಹಾಕಿದ್ದು ಅದರ ಪ್ರಕಾರ ಕೊರಿಯ ಪರ್ಯಾಯದ್ವೀಪದಲ್ಲಿ ಸ್ಥಿರ ಮತ್ತು ನಿರಂತರ ಶಾಂತಿಯನ್ನು ಕಾಪಾಡುವ ಕುರಿತು ಎರಡೂ ದೇಶಗಳು ಭರವಸೆಯನ್ನು ನೀಡಿವೆ. ಜೊತೆಗೆ ಕೊರಿಯನ್ ಯುದ್ಧದ ಸಮಯದಲ್ಲಿ ನಾಪತ್ತೆಯಾಗಿರುವ ಮತ್ತು ಬಂಧಿಯಾಗಿರುವ ವ್ಯಕ್ತಿಗಳನ್ನು ತಾಯ್ನಾಡಿಗೆ ಮರಳಿಸುವ ಬಗ್ಗೆಯೂ ಒಪ್ಪಂದ ಮಾಡಲಾಗಿದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಟ್ರಂಪ್, ಕಿಮ್ ಜೊತೆ ಭವಿಷ್ಯದಲ್ಲಿ ಇನ್ನಷ್ಟು ಬಾರಿ ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದರು ಮತ್ತು ಉತ್ತರ ಕೊರಿಯ ನಾಯಕನನ್ನು ಶ್ವೇತಭವನಕ್ಕೆ ಆಹ್ವಾನಿಸುವುದಾಗಿಯೂ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಿಮ್, ಇದೊಂದು ಐತಿಹಾಸಿಕ ಭೇಟಿಯಾಗಿದ್ದು ಹಳೆಯದನ್ನು ಹಿಂದೆ ಬಿಟ್ಟು ಮುನ್ನಡೆಯುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ