ನವದೆಹಲಿ: ಮೂರನೇ ಬಾರಿ ಅಧಿಕಾರಕ್ಕೇರಿದ ಬಳಿಕ ಪ್ರಧಾನಿ ಮೋದಿ ಈಗ ಮತ್ತೊಮ್ಮೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಆಗಸ್ಟ್ 21 ರಿಂದ ಮೋದಿ ಪೊಲ್ಯಾಂಡ್, ಉಕ್ರೇನ್ ದೇಶಗಳಿಗೆ ಭೇಟಿ ನಿಡಲಿದ್ದಾರೆ.
ಆಗಸ್ಟ್ 21 ರಂದು ಮೋದಿ ಮೊದಲು ಪೊಲ್ಯಾಂಡ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಪೊಲ್ಯಾಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ಮೋದಿ ಆ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಬರೋಬ್ಬರಿ 45 ವರ್ಷಗಳ ಬಳಿಕ ಪೊಲ್ಯಾಂಡ್ ಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವ ಐತಿಹಾಸಿಕ ಕ್ಷಣ ಇದಾಗಲಿದೆ.
ಎರಡು ದಿನಗಳ ಕಾಲ ಪೊಲ್ಯಂಡ್ ನಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಮೋದಿ ಬಳಿಕ ಆಗಸ್ಟ್ 23 ರಂದು ಉಕ್ರೇನ್ ಗೆ ಭೇಟಿ ನೀಡಲಿದ್ದಾರೆ. ಇದೂ ಕೂಡಾ ಐತಿಹಾಸಿಕ ಭೇಟಿಯಾಗಲಿದೆ. 30 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಉಕ್ರೇನ್ ಗೆ ಭೇಟಿ ನೀಡುತ್ತಿರುವುದಾಗಿದೆ.
ಕಳೆದ ತಿಂಗಳು ಉಕ್ರೇನ್ ವೈರಿ ರಾಷ್ಟ್ರ ರಷ್ಯಾಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಉತ್ತಮ ಬಾಂಧವ್ಯವಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಿತ್ತು. ಕಳೆದ ತಿಂಗಳು ಜಿ7 ಶೃಂಗದ ವೇಳೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಮೋದಿ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಮೋದಿ ಈಗ ಆ ರಾಷ್ಟ್ರಕ್ಕೆ ಐತಿಹಾಸಿಕ ಭೇಟಿ ನೀಡುತ್ತಿದ್ದಾರೆ.