ಸೋನಿಯಾ ಗಾಂಧಿ ತವರಿಗೆ ಪ್ರಧಾನಿ ಮೋದಿ ಮೊದಲ ವಿದೇಶ ಪ್ರವಾಸ

Krishnaveni K

ಬುಧವಾರ, 12 ಜೂನ್ 2024 (09:30 IST)
ನವದೆಹಲಿ: ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ ಮೊದಲ ವಿದೇಶ ಪ್ರವಾಸ ಫಿಕ್ಸ್ ಆಗಿದೆ. ಸೋನಿಯಾ ಗಾಂಧಿ ತವರೂರಿಗೆ ಮೋದಿ ಮೊದಲ ಯಾತ್ರೆ ಕೈಗೊಳ್ಳಲಿದ್ದಾರೆ.

ಸೋನಿಯಾ ತವರು ಇಟೆಲಿ ದೇಶಕ್ಕೆ ಮೋದಿ ಜಿ7 ಶೃಂಗ ಸಭೆಗಾಗಿ ತೆರಳಲಿದ್ದಾರೆ. ಇದು ಈ ಅವಧಿಯಲ್ಲಿ ಮೋದಿಯ ಮೊದಲ ವಿದೇಶ ಪ್ರವಾಸವಾಗಲಿದೆ. ಜೂನ್ 13 ರಿಂದ ಜೂನ್ 15 ರವರೆಗೆ ಇಟೆಲಿಯಲ್ಲಿ ಜಿ7 ಶೃಂಗ ಸಭೆ ನಡೆಯಲಿದೆ. ಈ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

ಇಟೆಲಿಯ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಜಿ7 ಶೃಂಗ ಸಭೆ ನಡೆಯಲಿದ್ದು, ವಿವಿಧ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ನಾಯಕ ಇಮ್ಯಾನುಲ್ ಮ್ಯಾಕ್ರೋನ್, ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿದ,  ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಈ ಬಾರಿ ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ. ಪ್ರಧಾನಿ ಮೋದಿ ಜೂನ್ 13 ರಂದು ಇಟೆಲಿಗೆ ತೆರಳಲಿದ್ದು ಜೂನ್ 14 ರಂದು ಸಂಜೆ ಭಾರತಕ್ಕೆ ಮರಳಲಿದ್ದಾರೆ. ಮೋದಿ ಜೊತೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಿದೇಶಾಂಕ ಕಾರ್ಯದರ್ಶಿ ಮತ್ತು ಇತರೆ ಉನ್ನತ ಅಧಿಕಾರಿಗಳು ತೆರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ