ಮಾಸ್ಕೋ : ಜಿ7 ಮತ್ತು ಮಿತ್ರ ರಾಷ್ಟ್ರಗಳು ರಷ್ಯಾ ಕಚ್ಚಾ ತೈಲ ಮೇಲೆ ವಿಧಿಸಿರುವ ದರ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ರಷ್ಯಾ ಸ್ವಾಗತಿಸಿದೆ.
ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಅವರು ರಷ್ಯಾದಲ್ಲಿ ಭಾರತದ ರಾಯಭಾರಿ ಪವನ್ ಕಪೂರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಜಿ7 ದೇಶಗಳು ಮತ್ತು ಮಿತ್ರರಾಷ್ಟ್ರಗಳು ವಿಧಿಸಿದ ರಷ್ಯಾದ ತೈಲದ ಮೇಲಿನ ಬೆಲೆ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ಉಪಪ್ರಧಾನಿ ಸ್ವಾಗತಿಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್ಡಮ್, ಅಮೆರಿಕ, ಯುರೋಪಿಯನ್ ಯೂನಿಯನ್ ಜೊತೆ ಆಸ್ಟ್ರೇಲಿಯಾ ಒಂದು ಬ್ಯಾರೆಲ್ ರಷ್ಯಾದ ಕಚ್ಚಾ ತೈಲಕ್ಕೆ 60 ಡಾಲರ್(49 ಸಾವಿರ ರೂ.) ದರವನ್ನು ನಿಗದಿ ಮಾಡಿದೆ.
ತೈಲ ಮಾರಾಟದಿಂದ ಸಂಗ್ರಹವಾದ ಆದಾಯವನ್ನು ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿದೆ ಎಂದು ಆರೋಪಿಸಿ ಜಿ7 ದೇಶಗಳು ಈ ನಿರ್ಧಾರವನ್ನು ಕೈಗೊಂಡಿದ್ದು ಡಿ.5ರಿಂದ ಜಾರಿಗೆ ಬಂದಿದೆ.