ಕೀವ್ : ಉಕ್ರೇನ್ ಮೇಲೆ ಶುಕ್ರವಾರ ಸಂಜೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐದು ಮಕ್ಕಳು ಸೇರಿದಂತೆ 26 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ದಾಳಿಯಿಂದ ಉಕ್ರೇನ್ನ ನಗರಗಳು ಜರ್ಜರಿತವಾಗಿದ್ದು, ಉಮಾನ್ನಲ್ಲಿ ವಸತಿ ಕಟ್ಟಡಗಳು ನೆಲಸಮಗೊಂಡಿವೆ. ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿದ್ದು ಉಕ್ರೇನ್ ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದೃಶ್ಯಗಳು ಮನಸ್ಸಿಗೆ ಘಾಸಿಗೊಳಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೊಂಡಿದ್ದಾರೆ.
ರಷ್ಯಾದ ನಿಯಂತ್ರಣದಲ್ಲಿರುವ ಪೂರ್ವ ನಗರವಾದ ಲುಗಾನ್ಸ್ಕ್ನ ನಿವಾಸಿಯೊಬ್ಬರು, ನನಗೆ ನನ್ನ ಮಕ್ಕಳನ್ನು ನೋಡಬೇಕು ಎನಿಸುತ್ತಿದೆ. ಅವರು ಬದುಕಿದ್ದಾರೋ ಇಲ್ಲವೋ ತಿಳಿದಿಲ್ಲ. ಅವರು ಅವಶೇಷಗಳ ಅಡಿಯಲ್ಲಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಬಹುಮಹಡಿ ವಸತಿ ಬ್ಲಾಕ್ನ ಅವಶೇಷಗಳ ನಡುವೆ ಬದುಕುಳಿದವರನ್ನು ಹುಡುಕಲು ಕ್ರೇನ್ಗಳನ್ನು ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.