ಬುರ್ಖಾ ಕಡ್ಡಾಯ ಮಾಡಿದ ತಾಲಿಬಾನ್!

ಸೋಮವಾರ, 9 ಮೇ 2022 (08:40 IST)
ಕಾಬೂಲ್ : ನಿರೀಕ್ಷೆಯಂತೆಯೇ ಅಫ್ಘಾನಿಸ್ತಾನದಲ್ಲಿ  ತಾಲಿಬಾನ್ ಆಡಳಿತ ತನ್ನ "ಅಂಧಾ ಕಾನೂನು'ಗಳನ್ನು ಜಾರಿಗೆ ತರಲು ಮುಂದಾಗಿದೆ.
 
ಶನಿವಾರ ನೀಡಿರುವ ಸ್ಪಷ್ಟ ಹಾಗೂ ನಿಖರ ಆದೇಶದಲ್ಲಿ, ಅಫ್ಘಾನಿಸ್ತಾನದ ಮಹಿಳೆಯರು ಸಾವರ್ಜನಿಕ ಸ್ಥಳಗಳಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚುವಂಥ ಬುರ್ಖಾ  ಧರಿಸಿ ಓಡಾಡಬೇಕು ಎಂದು ಹೇಳಿದೆ. ನಮ್ಮ ಸಹೋದರಿಯರು ಘನತೆಯಿಂದ ಬದುಕಬೇಕು ಎಂದು ನಾವು ಬಯಸುವುದಾಗಿ ತಾಲಿಬಾನ್ ಈ ಆದೇಶದಲ್ಲಿ ಹೇಳಿದೆ.

ತಾಲಿಬಾನ್ ಆಡಳಿತ ಬಂದರೆ ದೇಶದ ಮಹಿಳೆಯರ ಪರಿಸ್ಥಿತಿ ಯಾವ ರೀತಿ ಬದಲಾಗಲಿದೆ ಎಂದು ಊಹೆ ಮಾಡಲಾಗಿತ್ತೋ ಅದೇ ರೀತಿಯಲ್ಲಿ ತಾಲಿಬಾನ್ ತನ್ನ ಹಿಂದಿನ ಕಠಿಣ ನೀತಿ ನಿಯಮಗಳಿಗೆ ಹಿಂತಿರುಗಿದೆ.

ತಾಲಿಬಾನ್ ಸರ್ವೋಚ್ಚ ನಾಯಕ  ಹೈಬತುಲ್ಲಾ ಅಖುಂದ್ಜಾದಾ ಈ ಆದೇಶ ನೀಡಿದ್ದು,  ಮಹಿಳೆಯು ಮನೆಯ ಹೊರಗೆ ತನ್ನ ಮುಖದಿಂದ ಕಾಲಿನವರೆಗೂ ಮುಚ್ಚುವ ಬುರ್ಖಾ ಧರಿಸದೇ ಇದ್ದಲ್ಲಿ, ಆಕೆಯ ತಂದೆ ಅಥವಾ ಹತ್ತಿರದ ಪುರುಷ ಸಂಬಂಧಿಗೆ ಜೈಲು ಶಿಕ್ಷೆ ಅಥವಾ ಸರ್ಕಾರಿ ಉದ್ಯೋಗದಿಂದ ಆತನನ್ನು ವಜಾ ಮಾಡಲಾಗುವುದು ಎಂದು ಹೇಳಿದೆ.

"ಇಸ್ಲಾಮಿಕ್ ಎಮಿರೇಟ್ ಮತ್ತು ಅಫ್ಘಾನಿಸ್ತಾನದ ಜನರೊಂದಿಗೆ ಸಹಕರಿಸಲು ನಾವು ಜಗತ್ತಿಗೆ ಕರೆ ನೀಡುತ್ತಿದ್ದೇವೆ. ನಮಗೆ ತೊಂದರೆ ನೀಡಬೇಡಿ. ಹೆಚ್ಚಿನ ಒತ್ತಡವನ್ನು ತರಬೇಡಿ, ಏಕೆಂದರೆ ಇತಿಹಾಸವು ಸಾಕ್ಷಿಯಾಗಿದೆ,

ಆಫ್ಘನ್ನರು ಒತ್ತಡದಿಂದ ಪ್ರಭಾವಿತರಾಗುವುದಿಲ್ಲ," ಸದ್ಗುಣಗಳ ಪ್ರಚಾರ ಮತ್ತು ದುಶ್ಚಟ ತಡೆ ಸಚಿವ ಮೊಹಮ್ಮದ್ ಖಾಲಿದ್ ಹನಫಿ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಿಂದಿನ 1996-2001ರ ಆಳ್ವಿಕೆಯಲ್ಲಿ ಸಾರ್ವಜನಿಕವಾಗಿ ಮಹಿಳೆಯರಿಗೆ ಕಡ್ಡಾಯವಾಗಿದ್ದ ಉಡುಪನ್ನು ತಾಲಿಬಾನ್ ಉಲ್ಲೇಖಿಸಿದ್ದು, ಸಂಪೂರ್ಣ ಮುಖವನ್ನು ಮುಚ್ಚುವ ನೀಲಿ ಬಣ್ಣದ ಬುರ್ಖಾ ಉತ್ತಮವಾದುದು ಎಂದು ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಮಹಿಳೆಯರು ಧಾರ್ಮಿಕ ಕಾರಣಗಳಿಗಾಗಿ ಹಿಜಾಬ್ ಅನ್ನು ಧರಿಸುತ್ತಾರೆ ಆದರೆ ಕಾಬೂಲ್ನಂತಹ ನಗರ ಪ್ರದೇಶಗಳಲ್ಲಿ ಅನೇಕರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವುದಿಲ್ಲ. ತಾಲಿಬಾನ್ ಈಗಾಗಲೇ ಪಾಶ್ಚಿಮಾತ್ಯ ಸರ್ಕಾರಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದೆ.  

ಹೆಣ್ಣುಮಕ್ಕಳ ಪ್ರೌಢಶಾಲೆಗಳನ್ನು ಮುಚ್ಚುವುದು ಸೇರಿದಂತೆ ಮಹಿಳೆಯರ ಹಕ್ಕುಗಳನ್ನು ಸೀಮಿತಗೊಳಿಸಿದ್ದಕ್ಕಾಗಿ ಕೆಲವು ಧಾರ್ಮಿಕ ವಿದ್ವಾಂಸರು ಮತ್ತು ಇಸ್ಲಾಮಿಕ್ ರಾಷ್ಟ್ರಗಳಿಂದಲೂ ತಾಲಿಬಾನ್ ಟೀಕೆಯನ್ನು ಎದುರಿಸಿದೆ.

ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ಮಿಷನ್ ಶನಿವಾರದ ಹೇಳಿಕೆಯಲ್ಲಿ ತಾನು ಈ ವಿಷಯದ ಕುರಿತು ತಾಲಿಬಾನ್ನೊಂದಿಗೆ ತಕ್ಷಣ ಸಭೆಗಳನ್ನು ನಡೆಸುವುದಾಗಿ ಹೇಳಿದೆ, ತೀರ್ಪಿನ ಪರಿಣಾಮಗಳ ಕುರಿತು ಅಂತರರಾಷ್ಟ್ರೀಯ ಸಮುದಾಯದ ಇತರರೊಂದಿಗೆ ಸಮಾಲೋಚಿಸುವುದಾಗಿ ಹೇಳಿದೆ.

"ತಾಲಿಬಾನ್ಅಧಿಕಾರಿಗಳ ಇಂದಿನ ಪ್ರಕಟಣೆಯ ಬಗ್ಗೆ ಯುಎನ್ಎಎಂಎ ತೀವ್ರತರವಾದ ಕಾಳಜಿ ವ್ಯಕ್ತಪಡಿಸಿದೆ. ಈ ನಿರ್ಧಾರವು ಎಲ್ಲಾ ಆಫ್ಘನ್ನರ ಮಾನವ ಹಕ್ಕುಗಳ ಗೌರವ ಮತ್ತು ರಕ್ಷಣೆಗೆ ಸಂಬಂಧಿಸಿದ ಹಲವಾರು ಭರವಸೆಗಳಿಗೆ ವಿರುದ್ಧವಾಗಿದೆ" ಎಂದು ಹೇಳಿಕೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ