ನವದೆಹಲಿ : ದೇಶಾದ್ಯಂತ ಹಲಾಲ್ ಉತ್ಪನ್ನಗಳನ್ನು ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.
ವಕೀಲ ವಿಭೋರ್ ಆನಂದ ಎನ್ನುವವರು ಹಲಾಲ್ ಉತ್ಪನ್ನ ಹಾಗೂ ಹಲಾಲ್ ಮಾರಾಟ ಮಾಡುವುದು ಸಂವಿಧಾನದ 14 ಹಾಗೂ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಪಿಐಎಲ್ನಲ್ಲಿ ಮನವಿ ಮಾಡಿದ್ದಾರೆ.
ದೇಶದಲ್ಲಿ ಹಲಾಲ್ ಉತ್ಪನ್ನಗಳನ್ನು ಬಳಸುವ 15% ಜನಸಂಖ್ಯೆಯ ಸಲುವಾಗಿ 85% ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪ್ರತಿಪಾದಿಸಿರುವ ಅವರು, ಹಲಾಲ್ ಉತ್ಪನ್ನಗಳು ಮತ್ತು ಹಲಾಲ್ ಪ್ರಮಾಣೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.
ಇಸ್ಲಾಮಿನ ಪ್ರಕಾರ ಹಲಾಲ್ ಎಂಬ ಪದವು ಅನುಮತಿಸಲಾದ ಅಥವಾ ಕಾನೂನುಬದ್ಧವಾಗಿದೆ ಎಂದರ್ಥವಾಗಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಇದು ಸಂವಿಧಾನದಲ್ಲೂ ಉಲ್ಲೇಖವಾಗಿದೆ.
ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಮೇಲೂ ಒಂದು ಧರ್ಮದ ನಂಬಿಕೆಯನ್ನು ಹೇರಿಕೆ ಮಾಡುವುದು ಸರಿಯಲ್ಲ. ಇದರಿಂದಾಗಿ ದೇಶಾದ್ಯಂತ ಹಲಾಲ್ ಉತ್ಪನ್ನಗಳನ್ನು ಹಾಗೂ ಹಲಾಲ್ ಪ್ರಮಾಣೀಕರಣವನ್ನು ನಿಷೇಧಿಸಬೇಕು.