ಕೀವ್: ಉಕ್ರೇನ್ನ ದಕ್ಷಿಣ ಖೆರ್ಸನ್ ಪ್ರದೇಶದ ಮೇಲೆ ರಷ್ಯಾ ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿದ್ದಾರೆ. ಶುಕ್ರವಾರದಿಂದ ಖೆರ್ಸನ್ ನಗರದಲ್ಲಿ ಅಧಿಕಾರಿಗಳು ಕರ್ಫ್ಯೂ ಘೋಷಿಸಿದ್ದಾರೆ.
ರಷ್ಯಾದ ಕ್ಷಿಪಣಿಗಳು ರೈಲ್ವೆ ನಿಲ್ದಾಣ, ಮನೆಗಳು, ಹಾರ್ಡ್ವೇರ್ ಅಂಗಡಿ, ಸೂಪರ್ ಮಾರ್ಕೆಟ್ಗಳನ್ನೆಲ್ಲ ಹೊಡೆದುರುಳಿಸಿವೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಬುಧವಾರದಿಂದ ರಷ್ಯಾದ ಪಡೆಗಳು ಖೆರ್ಸನ್ ನಗರ ಮತ್ತು ಇತರೆ ಪ್ರದೇಶಗಳ ಮೇಲೆ ಬೃಹತ್ ಶೆಲ್ ದಾಳಿಯನ್ನು ನಡೆಸುತ್ತಿವೆ. ಯುದ್ಧದ ಸನ್ನಿವೇಶದಲ್ಲೂ ಖೆರ್ಸನ್ ನಗರದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತೆರೆಯುತ್ತಿರುವ ಏಕೈಕ ಹೈಪರ್ಮಾರ್ಕೆಟ್ನಲ್ಲಿ ಶೆಲ್ ದಾಳಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.