ಸ್ಥಳೀಯನನ್ನು ಕೊಂದಿದ್ದಕ್ಕೆ ಮೊಸಳೆಗಳ ಮೇಲೆ ಸೇಡು ತೀರಿಸಿಕೊಂಡ ಗ್ರಾಮಸ್ಥರು
ಮಂಗಳವಾರ, 17 ಜುಲೈ 2018 (12:01 IST)
ಇಂಡೊನೆಷಿಯಾ : ಸ್ಥಳೀಯನೊರ್ವನನ್ನು ಮೊಸಳೆಯೊಂದು ಕೊಂದು ಹಾಕಿದ್ದಕ್ಕೆ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ನಿರ್ದಯವಾಗಿ ಮೊಸಳೆಗಳ ಮೇಲೆ ಸೇಡು ತೀರಿಸಿಕೊಂಡ ಘಟನೆ ಪಪುವಾ ಪ್ರಾಂತ್ಯದಲ್ಲಿ ನಡೆದಿದೆ.
ಜಾನುವಾರಿಗೆ ಹುಲ್ಲು ಅರಸುತ್ತಾ ರೈತ ಸುಗಿಟೊ (48) ಆಕಸ್ಮಿಕವಾಗಿ ಮೊಸಳೆ ಪಾಲನಾ ಕೇಂದ್ರದ ಆವರಣದೊಳಕ್ಕೆ ಬಂದಿದ್ದ, ಆಗ ಮೊಸಳೆಯೊಂದು ಆತನ ಕಾಲನ್ನು ಕಚ್ಚಿ, ಬಾಲದಿಂದ ಅಪ್ಪಳಿಸಿ ಕೊಂದು ಹಾಕಿತ್ತು.ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಜನವಸತಿ ಪ್ರದೇಶದಲ್ಲಿ ಮೊಸಳೆ ಪಾಲನಾ ಕೇಂದ್ರ ಇರುವುದನ್ನು ಖಂಡಿಸಿ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಕೇಂದ್ರ ಒಪ್ಪಿಕೊಂಡಿರುವುದಾಗಿ ಸ್ಥಳೀಯ ವನ ಸಂರಕ್ಷಣಾ ಸಂಸ್ಥೆಯ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದರು.
ಆದರೂ ಕೂಡ ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು ಚಾಕು, ಪಿಕಾಸಿಯಂತಹ ಆಯುಧಗಳನ್ನು ಹಿಡಿದು ಪಾಲನಾ ಕೇಂದ್ರಕ್ಕೆ ನುಗ್ಗಿ ಅಲ್ಲಿದ್ದ,ಮರಿಗಳನ್ನು ಬಿಡದೆ ಎಲ್ಲಾ ಮೊಸಳೆಗಳನ್ನು ಕೊಚ್ಚಿ ಕೊಂದು ಹಾಕಿದ್ದಾರೆ. ಪೊಲೀಸರು ಮತ್ತು ವನ ಸಂರಕ್ಷಣಾ ಸಂಸ್ಥೆಯ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಗ್ರಾಮಸ್ಥರ ಗುಂಪನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಗ್ರಾಮಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ