ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದೇವೆ- ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್
ಕಾಶ್ಮೀರದಂತಹ ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಗಂಭೀರ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣವೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂದೇಶ ನೀಡಿದ್ದಾರೆ. ಪಾಕಿಸ್ತಾನದ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯವರಾಗಿದ್ದು, ಪರಸ್ಪರ ಅರ್ಥೈಸಿಕೊಂಡು ಬಾಳಬೇಕು ಎಂದು ಹೇಳಿದ್ದಾರೆ. ನಾವು ಶಾಂತಿ ಮತ್ತು ಪ್ರಗತಿಗಾಗಿ ಬದುಕುತ್ತೇವೆಯೇ ಅಥವಾ ನಾವು ಜಗಳವಾಡುತ್ತೇವೆಯೇ? ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತೇವೆಯೇ ಎಂಬುದು ನಮಗೆ ಬಿಟ್ಟಿದ್ದು. ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ್ದೇವೆ. ಆದರೆ ಇದರಿಂದ ನಮ್ಮ ಜನರಿಗೆ ಹೆಚ್ಚಿನ ದುಃಖ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತಂದಿದೆ ಎಂದು ಅವರು ಹೇಳಿದ್ದಾರೆ. ನಮ್ಮಲ್ಲಿ ಎಂಜಿನಿಯರ್ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರಿದ್ದಾರೆ. ಈ ಆಸ್ತಿಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಮತ್ತು ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ನಾವು ಬಯಸುತ್ತೇವೆ”ಎಂದು ಷರೀಫ್ ಹೇಳಿದರು. ನಾವು ಹಿಂದೆ ಮಾಡಿದ ತಪ್ಪುಗಳಿಂದ ಪಾಠಗಳನ್ನು ಕಲಿತಿದ್ದೇವೆ. ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದು, ಶಾಂತಿಯಿಂದ ಬದುಕಲು ಬಯಸುತ್ತೇವೆ. ಮದ್ದುಗುಂಡುಗಳ ದಾಳಿಯಿಂದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಬಯಸುವುದಿಲ್ಲ. ಇದು ನಾನು ಪ್ರಧಾನಿ ಮೋದಿಯವರಿಗೆ ನೀಡಲು ಬಯಸುವ ಸಂದೇಶವೆಂದು ಅವರು ಹೇಳಿದ್ದಾರೆ.