ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಬಂದ ಝೆಲೆನ್ಸ್ಕಿ
ಶನಿವಾರ, 19 ಮಾರ್ಚ್ 2022 (10:15 IST)
ಕೀವ್ : ಶೆಲ್ ದಾಳಿಯಲ್ಲಿ ಗಾಯಗೊಂಡ ಯುವತಿಯ ಆರೋಗ್ಯ ವಿಚಾರಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಸ್ಪತ್ರೆಗೆ ತೆರಳಿ ಧೈರ್ಯ ತುಂಬಿದ್ದಾರೆ.
ರಾಜಧಾನಿ ಕೀವ್ನ ವೊರ್ಜೆಲ್ ಪಟ್ಟಣದಿಂದ ಹೊರಡುವಾಗ ನಡೆದ ಶೆಲ್ ದಾಳಿಯಲ್ಲಿ 16 ವರ್ಷದ ಯುವತಿ ಗಾಯಗೊಂಡಿದ್ದಳು. ಆಕೆಯನ್ನು ಕಟ್ಯಾ ವ್ಲಾಸೆಂಕೊ ಎಂದು ಗುರುತಿಸಲಾಗಿದೆ. ಗಾಯಗೊಂಡ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಕೆಯನ್ನು ಭೇಟಿಯಾದ ಝಲೆನ್ಸ್ಕಿ ಅವರು ಮಾತನಾಡಿಸಿದ್ದಾರೆ. ಆಕೆಯನ್ನು ಟಿಕ್ಟಾಕ್ ಸ್ಟಾರ್ ಎಂದು ಗುರುತಿಸಿ ಹುರಿದುಂಬಿಸಿದ್ದಾರೆ. ಟಿಕ್ಟಾಕ್ನಲ್ಲಿ ಎಲ್ಲರೂ ನಿಮ್ಮನ್ನು ಬೆಂಬಲಿಸುತ್ತಾರೆ. ಆದ್ದರಿಂದಲೇ ನಾವು ಟಿಕ್ಟಾಕ್ನ್ನು ಬಳಸುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ಆಕೆಗೆ ಹುರಿದುಂಬಿಸಿದ್ದಾರೆ.
ಆಕೆಗೆ ಝೆಲೆನ್ಸ್ಕಿ ಅವರು ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳಿರುವ ಗುಚ್ಚವನ್ನು ನೀಡಿ, ಬೇಗ ಚೇತರಿಸಿಕೊಳ್ಳಿ ಎಂದು ಆಶಿಸಿದ್ದಾರೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.