ದುಬೈ: ಐಪಿಎಲ್ 13 ರಲ್ಲಿ ನಿನ್ನೆಯಿಡೀ ಸೂಪರ್ ಓವರ್ ಗಳದ್ದೇ ಕಾರುಬಾರು. ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ನಡುವಿನ ಮೊದಲ ಪಂದ್ಯ ಸೂಪರ್ ಓವರ್ ನಲ್ಲಿ ನಿರ್ಣಯವಾದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯ ಸೂಪರ್ ಓವರ್ ನಲ್ಲಿ ನಿರ್ಧಾರವಾಯಿತು.
ಮೊದಲ ಪಂದ್ಯದಲ್ಲಿ ಕೆಕೆಆರ್ ನೀಡಿದ 163 ರನ್ ಗಳ ಗುರಿ ಬೆನ್ನತ್ತಿದ ಹೈದರಾಬಾದ್ 6 ವಿಕೆಟ್ ಕಳೆದುಕೊಂಡು ಅಷ್ಟೇ ರನ್ ಗಳಿಸಿತು. ಸೂಪರ್ ಓವರ್ ನಲ್ಲಿ ಕೆಕೆಆರ್ 3 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್ 2 ವಿಕೆಟ್ ಕಳೆದುಕೊಂಡು 2 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಕೆಕೆಆರ್ 2 ಎಸೆತ ಬಾಕಿ ಇರುವಂತೇ ಪಂದ್ಯ ಗೆದ್ದುಕೊಂಡಿತು.
ಇದಕ್ಕಿಂತಲೂ ರೋಚಕವಾಗಿದ್ದಿದ್ದು, ಮುಂಬೈ-ಪಂಜಾಬ್ ನಡುವಿನ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ನಾಯಕ ಕೆಎಲ್ ರಾಹುಲ್ ಅರ್ಧಶತಕದ (77) ನೆರವಿನಿಂದ ಪಂಜಾಬ್ ಕೂಡಾ 20 ಓವರ್ ಗಳಲ್ಲಿ ಅಷ್ಟೇ ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ಮಾಡಲಾಯಿತು. ಇದರಲ್ಲಿ ಪಂಜಾಬ್ 2 ವಿಕೆಟ್ ಕಳೆದುಕೊಂಡು 5 ರನ್ ಗಳಿಸಿತು. ಮುಂಬೈ ಕೂಡಾ 1 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿತು. ಹೀಗಾಗಿ ಮತ್ತೊಂದು ಸೂಪರ್ ಓವರ್ ನಡೆಸಲಾಯಿತು. ಈ ಓವರ್ ನಲ್ಲಿ ಮುಂಬೈ 1 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿತು. ಇದನ್ನು ಬೆನತ್ತಿದ ಪಂಜಾಬ್ ವಿಕೆಟ್ ನಷ್ಟವಿಲ್ಲದೇ 15 ರನ್ ಗಳಿಸುವ ಮೂಲಕ ರೋಚಕವಾಗಿ ಪಂದ್ಯ ಗೆದ್ದಿತು. ಬಹುಶಃ ಐಪಿಎಲ್ ಇತಿಹಾಸದಲ್ಲೇ ಇಂತಹದ್ದೊಂದು ರೋಚಕ ಪಂದ್ಯವಿರಲಿಲ್ಲ ಎನ್ನಬಹುದು.