ಜೈಪುರ: ರಾಜಸ್ಥಾನ ತಂಡದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಶನಿವಾರ ಕಣಕ್ಕೆ ಇಳಿಯುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆಗೆ ಪಾತ್ರವಾದರು.
2019ರಲ್ಲಿ ಪ್ರಯಾಸ್ ರೇ ಬರ್ಮನ್ ತಮಗೆ 16 ವರ್ಷ, 157 ದಿನಗಳಾಗಿದ್ದಾಗ ಆರ್‌ಸಿಬಿ ಪರ ಕಣಕ್ಕಿಳಿದು, ಐಪಿಎಲ್ ಆಡಿದ ಅತಿ ಕಿರಿಯ ಎನಿಸಿಕೊಂಡಿದ್ದರು. ಆ ದಾಖಲೆಯನ್ನು ವೈಭವ್ ಮುರಿದಿದ್ದಾರೆ.
14 ವರ್ಷ ವಯಸ್ಸಿನ ವೈಭವ್ ಅವರು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದರು,. ನಾಯಕ ಸಂಜು ಸ್ಯಾಮ್ಸನ್ ಗಾಯಾಳಾಗಿದ್ದರಿಂದ ಅವಕಾಶ ಪಡೆದ ವೈಭವ್ ಅದನ್ನು ಸಮರ್ಥವಾಗಿ ಬಳಸಿಕೊಂಡರು.
ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಎತ್ತಿದ ಈ ಪೋರ ಒಟ್ಟು ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಬಾರಿಸಿದರು. ವೈಭವ್ ಸೂರ್ಯವಂಶಿ 20 ಎಸೆತಗಳಲ್ಲಿ 34 ರನ್ ಗಳಿಸಿದರು. ಮಾರ್ಕೊ ಯಾನ್ಸನ್ ಎಸೆತದಲ್ಲಿ ಕ್ರೀಸ್ ಬಿಟ್ಟಿದ್ದ ಅವರನ್ನು ರಿಷಭ್ ಪಂತ್ ಸ್ಟಂಪ್ಡ್ ಔಟ್ ಮಾಡಿದರು.
ಐಪಿಎಲ್ ಮೆಗಾ ಹರಾಜಿನ ವೇಳೆ ಬಿಹಾರದ ವೈಭವ್ ಅವರನ್ನು ₹1.1 ಕೋಟಿಗೆ ಮೌಲ್ಯಕ್ಕೆ ರಾಜಸ್ಥಾನ ತಂಡವು ಖರೀದಿಸಿತ್ತು. ಹಲವು ಪಂದ್ಯಗಳಲ್ಲಿ ಬೆಂಚ್ ಕಾಯುತ್ತಿದ್ದ ಈ ಪೋರ ಮೊದಲ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು.
ಆವೇಶ್ ಖಾನ್ ಅವರ ಬಿಗಿಬೌಲಿಂಗ್ ದಾಳಿಯ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 2 ರನ್‌ಗಳಿಂದ ಸೋಲಿಸಿತು. ಇದು ರಾಜಸ್ಥಾನಕ್ಕೆ 8 ಪಂದ್ಯಗಳಲ್ಲಿ ಎದುರಾದ 6ನೇ ಸೋಲು. ಲಖನೌ 5 ವಿಕೆಟ್‌ಗೆ 180 ರನ್ ಗಳಿಸಿತ್ತು. ದೊಡ್ಡ ಗುರಿ ಬೆನ್ನತ್ತಿದ ರಾಜಸ್ಥಾನ 5 ವಿಕೆಟ್‌ಗೆ 178 ರನ್ ಗಳಿಸಿ ಸೋಲೊಪ್ಪಿಕೊಂಡಿತು.