ಬೆಂಗಳೂರು: ರಜತ್ ಪಾಟೀದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋತಿತು. ಇದು ತವರಿನಲ್ಲಿ ಆರ್‌ಸಿಬಿ ತಂಡಕ್ಕೆ ಹ್ಯಾಟ್ರಿಕ್ ಸೋಲಾಗಿದೆ.
ಮಳೆಯಿಂದಾಗಿ ಸುಮಾರು 2 ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯವನ್ನು 14 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಪಂಜಾಬ್ ಬೌಲರ್‌ಗಳ ದಾಳಿ ಮತ್ತು ಫೀಲ್ಡರ್‌ಗಳ ಚುರುಕಾದ ಆಟದ ಮುಂದೆ ಆರ್‌ಸಿಬಿಯು ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 95 ರನ್ ಪೇರಿಸಿತು.
ಆರ್‌ಸಿಬಿ ಪರ ಟಿಮ್ ಡೇವಿಡ್ ಅವರ ಆಕರ್ಷಕ ಅರ್ಧಶತಕ (50; 26ಎ, 4X5, 6X3) ಗಳಿಸಿ ಮಿಂಚಿದರು. ನಾಯಕ ರಜತ್ ಪಾಟೀದಾರ್ (23; 18ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. 9 ಬ್ಯಾಟರ್‌ಗಳು ಎರಡಂಕಿ ಮುಟ್ಟಲೇ ಇಲ್ಲ.
ಗುರಿ ಬೆನ್ನಟ್ಟಿದ ಪಂಜಾಬ್ ತಂಡವು 12.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 98 ರನ್ ಗಳಿಸಿತು. ಪಂಜಾಬ್ ತಂಡಕ್ಕೆ ಆತಿಥೇಯ ಬಳಗದ ವೇಗಿ ಹ್ಯಾಜಲ್‌ವುಡ್ (14ಕ್ಕೆ3) ಮತ್ತು ಭುವನೇಶ್ವರ್ ಕುಮಾರ್ (26ಕ್ಕೆ2) ಸವಾಲೊಡ್ಡಿದರು. ಆದರೆ, ನೆಹಲ್ ವಧೇರಾ (33; 19ಎ) ಅವರು ಅಬ್ಬರದ ಆಟದ ಮೂಲಕ ಪಂಜಾಬ್ ಗೆಲುವಿ ದಡ ಸೇರಿತು. ಆರ್‌ಸಿಬಿ ಭಾನುವಾರ ಇದೇ ತಂಡದ ವಿರುದ್ಧ ಪಂಜಾಬ್‌ನಲ್ಲಿ ಆಡಲಿದೆ.