ಜೈಪುರ: ಕ್ರಿಕೆಟ್ ಲೋಕದ 'ರನ್ ಯಂತ್ರ' ಖ್ಯಾತಿಯ ಕಿಂಗ್ ವಿರಾಟ್ ಕೊಹ್ಲಿ ಅವರು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ಎನಿಸಿಕೊಂಡಿದ್ದಾರೆ.
ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಕೊಹ್ಲಿ ಅವರು ಶನಿವಾರ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ, ರಿಯಾನ್ ಪರಾಗ್ ಕ್ಯಾಚ್ ಪಡೆಯುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಐಪಿಎಲ್‌ನಲ್ಲಿ ತಮ್ಮ ಅಮೋಘ ಕ್ಷೇತ್ರರಕ್ಷಣೆ ಮೂಲಕ ಇದುವರೆಗೆ ಒಟ್ಟು 110 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಐಪಿಎಲ್ ಆರಂಭದಿಂದಲೂ ಆರ್‌ಸಿಬಿ ತಂಡದ ಪರ ಆಡುತ್ತಿರುವ ಕೊಹ್ಲಿ ಈವರೆಗೆ 242 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.
ಐಪಿಎಲ್‌ನಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ದಾಖಲೆ 'ಮಿಸ್ಟರ್ ಐಪಿಎಲ್' ಖ್ಯಾತಿಯ ಸುರೇಶ್ ರೈನಾ ಅವರ ಹೆಸರಿನಲ್ಲಿ ಈವರೆಗೆ ಇತ್ತು. ಅವರು ಒಟ್ಟು 109 ಕ್ಯಾಚ್ ಪಡೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಅವರ ದಾಖಲೆಯ 8ನೇ ಶತಕದ ನೆರವಿನಿಂದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 183 ರನ್ ಗಳಿಸಿತು.
ಈ ಗುರಿ ಬೆನ್ನತ್ತಿದ ರಾಯಲ್ಸ್ ಇನ್ನೂ 5 ಎಸೆತ ಬಾಕಿ ಇರುವಂತೆಯೇ 189 ರನ್ ಗಳಿಸಿ, ಜಯದ ನಗೆ ಬೀರಿತು. ಗೆಲ್ಲಲು ಒಂದು ರನ್ ಬೇಕಿದ್ದಾಗ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಸಿಕ್ಸರ್ ಸಿಡಿಸಿ ಶತಕ ಪೂರೈಸಿಕೊಂಡರು. ಅವರು ಐಪಿಎಲ್‌ನಲ್ಲಿ 6ನೇ ಶತಕ ಇದಾಗಿದೆ.