IPL 2025: ಇಂದಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌- ಲಖನೌ ಸೂಪರ್‌ ಜೈಂಟ್ಸ್‌ ಸೆಣಸಾಟ

Sampriya

ಸೋಮವಾರ, 24 ಮಾರ್ಚ್ 2025 (14:15 IST)
Photo Courtesy X
ವಿಶಾಖಪಟ್ಟಣ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಇಂದು ಮತ್ತೊಂದು ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಲಖನೌ ಸೂಪರ್‌ ಜೈಂಟ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಈ ಆವೃತ್ತಿಯಲ್ಲಿ ಶುಭಾರಂಭಕ್ಕೆ ಎದುರುನೋಡುತ್ತಿವೆ.

ಈ ಬಾರಿಯ ವಿಶೇಷವೆಂದರೆ ಕಳೆದ ಆವೃತ್ತಿಯಲ್ಲಿ ಲಖನೌ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಆದರೆ, ಈ ಬಾರಿ ಅವರು ನಾಯಕನ ಪಾತ್ರವಹಿಸಿಲ್ಲ. ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ತಂಡವನ್ನು ಮುನ್ನೆಸಲಿದ್ದಾರೆ.

ಹೋದ ವರ್ಷ ಡೆಲ್ಲಿ ತಂಡದ ಸಾರಥ್ಯ ವಹಿಸಿದ್ದ ರಿಷಭ್ ಪಂತ್ ಈಗ ಲಖನೌ ಬಳಗವನ್ನು ಮುನ್ನಡೆಸಲಿದ್ದಾರೆ. ತಮ್ಮ ನಿಕಟಪೂರ್ವ ತಂಡದ ಎದುರು ಆಡುವ ಮೂಲಕ ಈ ವರ್ಷದ ಐಪಿಎಲ್ ಅಭಿಯಾನವನ್ನು ಆರಂಭಿಸಲಿದ್ದಾರೆ. ಈಚೆಗೆ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಿಷಭ್ ಪಂತ್ ಅವರನ್ನು ಲಖನೌ ತಂಡವು ₹27 ಕೋಟಿ ದಾಖಲೆಯ ಮೊತ್ತಕ್ಕೆ ಖರೀದಿಸಿತ್ತು.

ಮೇಲ್ನೋಟಕ್ಕೆ ಡೆಲ್ಲಿ ತಂಡವು ಸಮತೋಲನವಾಗಿರುವಂತೆ ಕಾಣುತ್ತಿದೆ. ಬ್ಯಾಟಿಂಗ್‌ ಪಡೆ ಉತ್ತಮವಾಗಿದೆ. ಯುವ ಆಟಗಾರ ಜೇಕ್ ಫ್ರೇಸರ್ ಮೆಕ್‌ಗುರ್ಕ್, ಕಳೆದ ದೇಶಿ ಋತುವಿನಲ್ಲಿ ರನ್‌ಗಳ ಹೊಳೆ ಹರಿಸಿದ್ದ ಕರುಣ್ ನಾಯರ್, ಫಾಫ್ ಡುಪ್ಲೆಸಿ, ಅಭಿಷೇಕ್ ಪೊರೇಲ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರ ಬ್ಯಾಟಿಂಗ್ ಬಲ ಇದೆ.  

ಲಖನೌ ತಂಡದಲ್ಲಿ ಡೇವಿಡ್ ಮಿಲ್ಲರ್, ಏಡನ್ ಮರ್ಕರಂ ಮತ್ತು ನಿಕೊಲಸ್ ಪೂರನ್ ಅವರಂತಹ ಬೀಸಾಟದ ಪರಿಣತರಿದ್ದಾರೆ.  ಮಿಚೆಲ್ ಮಾರ್ಷ್ ಹಾಗೂ ಆಯುಷ್ ಬಡೋನಿ ಅವರು ತಮ್ಮ ಲಯಕ್ಕೆ ಮರಳಿದರೆ ತಂಡದ ಮೊತ್ತ ಮತ್ತಷ್ಟು ದೊಡ್ಡದಾಗಬಹುದು.  ಇಂದು ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ