ಆರ್‌ಸಿಬಿ ತಂಡದಲ್ಲಿ ಈ ಬಾರಿ ಏನೋ ವಿಶೇಷವಿದೆ: ಕ್ರಿಕೆಟ್‌ ದಿಗ್ಗಜ ಮ್ಯಾಥ್ಯೂ ಹೇಡನ್ ಹೇಳಿದ್ದೇನು

Sampriya

ಭಾನುವಾರ, 23 ಮಾರ್ಚ್ 2025 (14:34 IST)
Photo Courtesy X
ಕೋಲ್ಕತ್ತ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಬಹಳ ಸಮಯದ ನಂತರ ಉತ್ತಮ ಬೌಲಿಂಗ್ ಪಡೆಯನ್ನು ನೋಡುತ್ತಿದ್ದೇನೆ. ಈ ವರ್ಷ ತಂಡದಲ್ಲಿ ಏನೋ ವಿಶೇಷತೆ ಇದೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಶ್ಲಾಘಿಸಿದ್ದಾರೆ.  

ಶನಿವಾರ ನಡೆದ ಐಪಿಎಲ್‌ನ 18ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಬೆಂಗಳೂರು ಕೋಲ್ಕತ್ತ ನೈಟ್ ರೈಡರ್ಸ್‌ನ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತ್ತು. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ವಿಭಾಗದಲ್ಲಿ ಆರ್‌ಸಿಬಿ ಸಾಂಘಿಕ ಆಟ ಪ್ರದರ್ಶಿಸಿತ್ತು. 175 ರನ್‌ಗಳ ಗುರಿಯನ್ನು 22 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ಕಳೆದುಕೊಂಡು ಮುಟ್ಟಿತು.

ಈ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ 4 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದು, ಕೋಲ್ಕತ್ತ ರನ್ ವೇಗಕ್ಕೆ ಕಡಿವಾಣ ಹಾಕಿದರು. ನಂತರದಲ್ಲಿ ಫಿಲ್ ಸಾಲ್ಟ್ (56), ವಿರಾಟ್ ಕೊಹ್ಲಿ (59) ಮತ್ತು ರಜತ್ ಪಾಟಿದಾರ್ (34) ಉತ್ತಮ ಬ್ಯಾಟಿಂಗ್ ಮೂಲಕ ಗೆಲುವಿಗೆ ನೆರವಾದರು.

ಈ ವರ್ಷದ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ತಂಡಕ್ಕೆ ಕೃಣಾಲ್ ಪಾಂಡ್ಯ ಅವರ ಆಯ್ಕೆಯು ಸ್ಮಾರ್ಟ್ ಪಿಕ್ ಎಂದು ಹೇಡನ್‌ ಶ್ಲಾಘಿಸಿದ್ದಾರೆ. ನೂತನ ನಾಯಕ ರಜತ್ ಪಾಟಿದಾರ್ ಅವರಿಗೆ ಇದು ಒಂದು ದೃಢವಾದ ಮತ್ತು ಮಹತ್ವದ ಗೆಲುವು. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ಖಂಡಿತವಾಗಿಯೂ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಆರ್‌ಸಿಬಿ ತಂಡ ಉತ್ತಮವಾಗಿದ್ದು, ಕೃಣಾಲ್ ಪಾಂಡ್ಯ ಆರ್‌ಸಿಬಿಯ ಆಸ್ತಿಯಾಗಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಬಹಳ ಸಮಯದ ನಂತರ ಆರ್‌ಸಿಬಿಯ ಉತ್ತಮ ಬೌಲಿಂಗ್ ಪಡೆಯನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ