IPL 2005: ಸನ್‌ರೈಸರ್ಸ್‌ ವಿರುದ್ಧ ಮುಯ್ಯಿ ತೋರಿಸಿಕೊಳ್ಳುತ್ತಾ ರಾಜಸ್ಥಾನ ರಾಯಲ್ಸ್‌

Sampriya

ಭಾನುವಾರ, 23 ಮಾರ್ಚ್ 2025 (12:42 IST)
Photo Courtesy X
ಹೈದರಾಬಾದ್‌: ಇಂಡಿಯನ್‌ ಪ್ರೀಮಿಯಲ್‌ ಲೀಗ್‌ನಲ್ಲಿ ಇಂದು ಮಧ್ಯಾಹ್ನದ ಹೈವೋಲ್ಟೇಜ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌- ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಮುಖಾಮುಖಿಯಾಗಲಿವೆ.

ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಮತ್ತು ಅನುಭವಿ ಬೌಲರ್‌ಗಳನ್ನು ಹೊಂದಿರುವ ಹಾಲಿ ರನ್ನರ್ಸ್‌ ಅಪ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ತವರಿನಲ್ಲಿ ಗೆಲುವಿನ ಅಭಿಯಾನ ಆರಂಭಿಸುವ ತವಕದಲ್ಲಿದೆ. ಮತ್ತೊಂದೆಡೆ ರಾಯಲ್ಸ್‌ ತಂಡವು ಕಳೆದ ಆವೃತ್ತಿಯ ಪ್ಲೇ ಆಫ್‌ ಪಂದ್ಯದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.

ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಮತ್ತು ರಾಯಲ್ಸ್ ತಂಡಗಳು ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಎರಡರಲ್ಲೂ ಸನ್‌ರೈಸರ್ಸ್ ಪಾರಮ್ಯ ಮೆರೆದಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ 36 ರನ್‌ಗಳಿಂದ ರಾಜಸ್ಥಾನವನ್ನು ಮಣಿಸಿ ಹೈದರಾಬಾದ್‌ ತಂಡವು ಫೈನಲ್‌ ಪ್ರವೇಶಿಸಿತ್ತು. ರಾಯಲ್ಸ್‌ಗೆ ಇದೀಗ ಮುಯ್ಯಿ ತೀರಿಸಲು ಅವಕಾಶವಿದೆ.

ಸನ್‌ರೈಸರ್ಸ್ ಕಳೆದ ಋತುವಿನಲ್ಲಿ ಮೂರು ಬಾರಿ 250ಕ್ಕೂ ಅಧಿಕ ರನ್‌ ಪೇರಿಸಿತ್ತು. ಹೀಗಾಗಿ, ಈ ಬಾರಿಯೂ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್‌ ಹೆಡ್ ಆಟದ ಮೇಲೆ ಎಲ್ಲರ ಗಮನ ನೆಟ್ಟಿದೆ. ಅವರಲ್ಲದೆ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡ ಆತಿಥೇಯ ತಂಡವು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತವನ್ನು ಗಳಿಸುವ ನಿರೀಕ್ಷೆಯಿದೆ.

ಮತ್ತೊಂದೆಡೆ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದ ಚೇತರಿಸಿಕೊಂಡಿರುವುದು ತಂಡದ ಬಲ ಹೆಚ್ಚಿಸಿದೆ. ಅನುಭವಿ ವೇಗಿಗಳಾದ ನಾಯಕ ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಸ್ಪಿನ್ನರ್ ಆ್ಯಡಂ ಜಂಪಾ ಅವರು ಬೌಲಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ.

ರಾಜಸ್ಥಾನ ತಂಡವನ್ನು ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್‌ ಪರಾಗ್‌ ಮುನ್ನಡೆಸಲಿದ್ದಾರೆ. ತಂಡದ ಕಾಯಂ ನಾಯಕ ಸಂಜು ಸ್ಯಾಮ್ಸನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೆ ಆಶ್ಚರ್ಯವಿಲ್ಲ. ಇಂಗ್ಲೆಂಡ್‌ನ ಜೋಸ್ ಬಟ್ಲರ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದರಿಂದ ಬ್ಯಾಟಿಂಗ್ ಬಲ ಕೊಂಚ ಕಡಿಮೆಯಾಗಿದೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ