IPL 2025: ಪಾದಾರ್ಪಣೆ ಪಂದ್ಯದಲ್ಲೇ ಎಲ್ಲರ ಹೃದಯ ಗೆದ್ದ ವಿಘ್ನೇಶ್‌ ಪುತ್ತೂರು ಯಾರು, ಹಿನ್ನೆಲೆ ಗೊತ್ತಾ

Sampriya

ಸೋಮವಾರ, 24 ಮಾರ್ಚ್ 2025 (14:48 IST)
Photo Courtesy X
ಚೆನ್ನೈ: ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ ಸೋಲು ಅನುಭವಿಸಿತು. ಆದರೆ, ಆ ತಂಡವನ್ನು ಪ್ರತಿನಿಧಿಸಿದ್ದ ವಿಘ್ನೇಶ್‌ ಪುತ್ತೂರು ಎಂಬ ಯುವಕ ಚೊಚ್ಚಲ ಪಂದ್ಯದಲ್ಲೇ ಮೂರು ವಿಕೆಟ್‌ ಪಡೆದು ಎಲ್ಲರ ಹೃದಯ ಗೆದ್ದಿದ್ದಾರೆ.

ಕೇರಳ ಮೂಲದ 24 ವರ್ಷದ ಈ ವಿಘ್ನೇಶ್‌ ಎಂಬ ಯುವಕ ಸದ್ಯ ಕ್ರಿಕೆಟ್‌ ಲೋಕದಲ್ಲಿ ಸುದ್ದಿಯಲ್ಲಿದ್ದಾರೆ. ಮಾತ್ರವಲ್ಲ, ಕ್ರಿಕೆಟ್‌ ದಂತಕತೆ ಮಹೇಂದ್ರ ಸಿಂಗ್‌ ಧೋನಿ ಅವರಿಂದಲೂ ಭುಜ ತಟ್ಟಿ ಮೆಚ್ಚುಗೆ ಪಡೆದಿರುವ ಈ ಬೌಲರ್‌ ಭರವಸೆ ಮೂಡಿಸಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಇಂಪ್ಯಾಕ್ಸ್‌ ಆಟಗಾರನಾಗಿ ಕಣಕ್ಕೆ ಇಳಿದ ವಿಘ್ನೇಶ್‌ ಮೂರು ವಿಕೆಟ್‌ ಪಡೆದು ಮಿಂಚಿದ್ದರು. ರೋಹಿತ್ ಶರ್ಮಾ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ವಿಘ್ನೇಶ್ ತಮ್ಮ ಸ್ಪಿನ್‌ ಮೋಡಿಯಿಂದ ಆಕರ್ಷಿಸಿದರು.

ಮತ್ತೊಂದು ವಿಶೇಷವೆಂದರೆ ವಿಘ್ನೇಶ್‌ ಅವರು ಕೇರಳ ಪರ ಹಿರಿಯರ ಮಟ್ಟದಲ್ಲಿ ಈ ವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿದವರಲ್ಲ. ಆದರೂ ಘಟಾನುಘಟಿಗಳ ಅಖಾಡಕ್ಕೆ ಧುಮುಕಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು, ಫೀಲ್ಡಿಂಗ್‌ನಲ್ಲೂ ವಿಘ್ನೇಶ್‌ ಗಮನ ಸೆಳೆದರು.

ಬಲಗೈ ಬ್ಯಾಟರ್‌ ಹಾಗೂ ಎಡಗೈ ಸ್ಪಿನ್ ಬೌಲರ್‌ ಆಗಿರುವ ವಿಘ್ನೇ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. 14 ವರ್ಷದೊಳಗಿನ ಮತ್ತು 19 ವರ್ಷದೊಳಗಿನ ಮಟ್ಟದಲ್ಲಿ ಕೇರಳ ಪರ ಮಾತ್ರ ಆಡಿದ್ದಾರೆ. ಆದರೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿಯೂ ಸಹ ಆಡಿದ್ದಾರೆ. ಟಾಟಾ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಈ ಆಟಗಾರನನ್ನು ಮೂಲ ಬೆಲೆ ₹30 ಲಕ್ಷಕ್ಕೆ ತೆಕ್ಕೆಗೆ ಹಾಕಿಕೊಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ