ಐಪಿಎಲ್ ಹರಾಜು: ಹರಾಜಾದ ಮತ್ತು ಹರಾಜಾಗದೇ ಉಳಿದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ

ಮಂಗಳವಾರ, 18 ಡಿಸೆಂಬರ್ 2018 (17:34 IST)
ಮುಂಬೈ: ಐಪಿಎಲ್ ನ ಈ ಆವೃತ್ತಿಗೆ ಇಂದು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ವೆಸ್ಟ್ ಇಂಡೀಸ್ ನ ಯುವ ಹೊಡೆಬಡಿಯ ಆಟಗಾರ ಶಿಮ್ರೋನ್ ಹೆಟ್ ಮೇರ್ ಅವರನ್ನು ಆರ್ ಸಿಬಿ 4.2 ಕೋಟಿ ರೂ.ಗೆ ಖರೀದಿ ಮಾಡಿದೆ.


ಇನ್ನೊಬ್ಬ ವಿಂಡೀಸ್ ಆಟಗಾರ ಕಾರ್ಲೋಸ್ ಬ್ರಾತ್ ವೈಟ್ ರನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ 5 ಕೋಟಿ ರೂ.ಗೆ ಖರೀದಿ ಮಾಡಿದೆ. ಇವರ ಮೂಲಧನ ಕೇವಲ 75 ಲಕ್ಷ ರೂ. ಆಗಿತ್ತು. ಇನ್ನು 2 ಕೋಟಿ ರೂ. ಮೂಲಧನ ಹೊಂದಿದ್ದ ಕ್ರಿಸ್ ವೋಕ್ ರನ್ನು ಯಾವುದೇ ತಂಡ ಖರೀದಿಸಲು ಆಸಕ್ತಿ ತೋರಲಿಲ್ಲ. ಅದೇ ರೀತಿ ಯುವರಾಜ್ ಸಿಂಗ್, ಬ್ರೆಂಡಮ್ ಮೆಕ್ಕಲಮ್, ಮಾರ್ಟಿನ್ ಗುಪ್ಟಿಲ್, ಚೇತೇಶ್ವರ ಪೂಜಾರ, ಮನೋಜ್ ತಿವಾರಿ ಕೂಡಾ ಹರಾಜಾಗದೇ ಉಳಿದರು.

ಭಾರತದ ಭರವಸೆಯ ಆಟಗಾರ ಹನುಮ ವಿಹಾರಿ ದೆಹಲಿ ತಂಡಕ್ಕೆ 2 ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ. ಇವರ ಮೂಲಧನ ಕೇವಲ 50 ಲಕ್ಷ ರೂ. ಆಗಿತ್ತು. ಇನ್ನು, ಸ್ಪಿನ್ನರ್ ಅಕ್ಸರ್ ಪಟೇಲ್ ಖರೀದಿಗೆ ಪಂಜಾಬ್ ಮತ್ತು ದೆಹಲಿ ತಂಡ ಪೈಪೋಟಿ ನಡೆಸಿತು. ಅಂತಿಮವಾಗಿ ಪಟೇಲ್ 5 ಕೋಟಿ ರೂ.ಗೆ ದೆಹಲಿ ಪಾಲಾದರು.

ವೇಗಿ ಮೋಹಿತ್ ಶರ್ಮಾರನ್ನು ಸಿಎಸ್ ಕೆ 5 ಕೋಟಿ ರೂ.ಗೆ ಖರೀದಿಸಿದೆ. ಜಾರ್ಖಂಡ್ ವೇಗಿ ವರುಣ್ ಏರನ್ ರನ್ನು ಆರ್ ಸಿಬಿ 2.4 ಕೋಟಿ ರೂ. ಖರೀದಿಸಿತು. ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಶಮಿ 4.8 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾದರೆ ಇಶಾಂತ್ ಶರ್ಮಾ 1.1 ಕೋಟಿ ರೂ.ಗೆ ದೆಹಲಿ ಪಾಲಾದರು. ಲಂಕಾ ವೇಗಿ ಲಸಿತ್ ಮಾಲಿಂಗರನ್ನು 2 ಕೋಟಿ ರೂ.ಗೆ ಮುಂಬೈ ಖರೀದಿಸಿತು.

ಜಾಕ್ ಪಾಟ್ ಹೊಡೆದವರೆಂದರೆ ಜಯದೇವ್ ಉನಾದ್ಕಟ್. 1.8 ಕೋಟಿ ರೂ. ಮೂಲಧನ ಹೊಂದಿದ್ದ ಈ ಆಟಗಾರನನ್ನು ರಾಜಸ್ಥಾನ್ ಭರ್ಜರಿ 8.4 ಕೋಟಿ ರೂ.ಗೆ ಖರೀದಿಸಿದೆ. ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 1.2 ಕೋಟಿ ರೂ.ಗೆ ಹೈದರಾಬಾದ್ ಗೆ ಬಿಕರಿಯಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ