ಐಪಿಎಲ್‌ನಲ್ಲೂ ಮತ್ತೊಂದು ದಾಖಲೆ ಬರೆದ ಕಿಂಗ್‌ ಕೊಹ್ಲಿ: ಈ ಸಾಧನೆ ಮಾಡಿದ ಏಕೈಕ ಬ್ಯಾಟರ್‌

Sampriya

ಭಾನುವಾರ, 23 ಮಾರ್ಚ್ 2025 (10:16 IST)
Photo Courtesy X
ಕೋಲ್ಕತ್ತ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ವಿರಾಟ್‌ ಕೊಹ್ಲಿ ಮತ್ತು ಫಿಲ್ ಸಾಲ್ಟ್‌ ಅವರ ಅರ್ಧಶತಕ ಮತ್ತು ಕೃಣಾಲ್‌ ಪಾಂಡ್ಯ ಅವರ ಅಮೋಘ ಬೌಲಿಂಗ್‌ ದಾಳಿಯ ನೆರವಿನಿಂದ ಆರ್‌ಸಿಬಿ ತಂಡವು ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಕಳೆದ 18 ಆವೃತ್ತಿಗಳಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಕಿಂಗ್ ಕೊಹ್ಲಿ ಅವರು ಕೋಲ್ಕತ್ತದ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಕೊನೆವರೆಗೂ ಆಡಿದ ಕೊಹ್ಲಿ 36 ಎಸೆತಗಳಲ್ಲಿ 59 ರನ್‌ ಗಳಿಸಿ ಔಟಾಗದೇ ಉಳಿದರು. ಇದು ಐಪಿಎಲ್‌ನಲ್ಲಿ 56ನೇ ಅರ್ಧಶತಕವಾಗಿದೆ. ಐಪಿಎಲ್‌ನಲ್ಲಿ ಗರಿಷ್ಠ ಶತಕದ ದಾಖಲೆಯೂ ಕೊಹ್ಲಿ (8 ಶತಕ) ಹೆಸರಿನಲ್ಲಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 174 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿಗೆ 16.2 ಓವರ್‌ಗಳಲ್ಲೇ ಜಯ ಸಾಧಿಸಿ, ಗೆಲುವಿನೊಂದಿಗೆ ಆರ್‌ಸಿಬಿ ಅಭಿಯಾನ ಆರಂಭಿಸಿತು. ಆರ್‌ಸಿಬಿ ತಂಡವು ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಮೂರು ಬಾರಿ ರನ್ನರ್ಸ್‌ ಅಪ್‌ ಆಗಿದೆ.

ಶನಿವಾರದ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್‌ ಎಂಬ ಹಿರಿಮೆಗೆ ಪಾತ್ರವಾದರು. ಕೆಕೆಆರ್‌ ವಿರುದ್ಧ ಪಂದ್ಯದಲ್ಲಿ 38 ರನ್‌ ಗಳಿಸಿದ್ದಾಗ ಕೆಕೆಆರ್‌ ವಿರುದ್ಧ ಒಟ್ಟಾರೆ 1,000 ರನ್‌ ಸಿಡಿಸಿದ ಸಾಧನೆ ಮಾಡಿದರು. ಇದು ಕೆಕೆಆರ್‌ ಎದುರು ಅವರಿಗೆ 35ನೇ ಪಂದ್ಯ. ಕೊಹ್ಲಿ ಈ ರೀತಿ ತಂಡದವೊಂದರ ವಿರುದ್ಧ ಸಾವಿರ ರನ್‌ ಗಳಿಸಿದ್ದು ನಾಲ್ಕನೇ ಬಾರಿ. ಈಗಾಗಲೇ, ಚೆನ್ನೈ ಸೂಪರ್‌ ಕಿಂಗ್ಸ್‌ (1,053 ರನ್‌), ಡೆಲ್ಲಿ ಕ್ಯಾಪಿಟಲ್ಸ್‌ ( 1,057 ರನ್‌), ಪಂಜಾಬ್‌ ಕಿಂಗ್ಸ್‌ (1,030 ರನ್‌) ವಿರುದ್ಧವೂ ಸಾವಿರ ರನ್‌ ಬಾರಿಸಿದ್ದಾರೆ.

ಉಳಿದಂತೆ ಡೇವಿಡ್‌ ವಾರ್ನರ್‌ (ಕೆಕೆಆರ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ) ಮತ್ತು ರೋಹಿತ್‌ ಶರ್ಮಾ (ಕೆಕೆಆರ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ) ಎರಡು ತಂಡಗಳ ಎದುರು ಸಾವಿರ ರನ್‌ ಕಲೆಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ