ಚೆನ್ನೈ: ಐಪಿಎಲ್ 2024ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ರೋಚಕ ಕಾದಾಟಕ್ಕೆ ಚೆನ್ನೈನ ಚೆಪಾಕ್ ಮೈದಾನ ಸಜ್ಜಾಗಿದೆ.
ಇದೀಗ ಈ ಬಾರಿ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲಕ್ಕೆ ಅಭಿಮಾನಿಗಳಲ್ಲಿ ಶುರುವಾಗಲಿದ್ದು, ಐಪಿಎಲ್ 2024ರ ಟೂರ್ನಿಯ ಲೀಗ್ ಹಂತದ ಅಗ್ರ ಎರಡು ತಂಡಗಳಾಗಿರುವ ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ಮಧ್ಯೆ ಹಣಾಹಣಿ ನಡೆಯಲಿದೆ.
ಅಹಮದಾಬಾದ್‌ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡದ ವಿರುದ್ಧ ಗೆದ್ದ ಕೆಕೆಆರ್ ನೇರವಾಗಿ ಫೈನಲ್‌ಗೆ ಲಗ್ಗೆಯಿಟ್ಟಿತು. ಇದೇ ವೇಳೆ ಕೆಕೆಆರ್ ವಿರುದ್ಧ ಸೋತ ಸನ್‌ರೈಸರ್ಸ್, ಆ ಬಳಿಕ ಎರಡನೇ ಕ್ವಾಲಿಫೈಯರ್ ಕದನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 36 ರನ್‌ಗಳಿಂದ ಗೆದ್ದು ಮತ್ತೆ ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗಿದೆ.
14 ಪಂದ್ಯಗಳಲ್ಲಿ ಕೆಕೆಆರ್ ತಂಡ 9 ಪಂದ್ಯಗಳನ್ನು ಗೆದ್ದು, 3 ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಎಸ್‌ಆರ್‌ಹೆಚ್ ತಂಡ 14 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು, 5 ಪಂದ್ಯದಲ್ಲಿ ಸೋಲುಂಡಿದೆ. ಒಟ್ಟು 17 ಅಂಕಗಳನ್ನು ಗಳಿಸಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ.