ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಸ್ತುತ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಇಂದು ಚೆನ್ನೈನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ, ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಲಿದೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋತ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದ ರಾಜಸ್ಥಾನ ರಾಯಲ್ಸ್ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಭಾನುವಾರ ಫೈನಲ್‌ನಲ್ಲಿ ಕೋಲ್ಕತ್ತ ತಂಡವನ್ನು ಎದುರಲಿಸಲಿದೆ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಣ ಇಂದಿನ ಪಂದ್ಯದಲ್ಲಿ ಉತ್ತಮ ಹೋರಾಟ ನಿರೀಕ್ಷಿಸಲಾಗಿದೆ. ಮೇ 2ರಂದು ಹೈದರಾಬಾದಿನಲ್ಲಿ ಇವೆರಡು ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿ ಆದಾಗ ಸನ್‌ರೈಸರ್ಸ್ ಒಂದು ರನ್‌ನಿಂದ ಜಯಗಳಿಸಿತ್ತು.
ರಾಜಸ್ಥಾನ್ ರಾಯಲ್ಸ್ 2008ರಲ್ಲಿ ಚಾಂಪಿಯನ್ ಆಗಿತ್ತು. 2022ರಲ್ಲಿ ರನ್ನರ್ಅಪ್ ಆಗಿತ್ತು. ಅತ್ತ 2016ರಲ್ಲಿ ಆರ್‌ಸಿಬಿ ಮಣಿಸಿ ಟ್ರೋಫಿ ಗೆದ್ದಿದ್ದ ಹೈದರಾಬಾದ್ ತಂಡವು 2018ರಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಎಡವಿತ್ತು. ಹಾಗಾಗಿ, ಈ ಎರಡರಲ್ಲಿ ಗೆದ್ದ ತಂಡವು ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗುತ್ತದೆ.