ತ್ರಿಮೂರ್ತಿಗಳು

ಗುರುವಾರ, 20 ನವೆಂಬರ್ 2014 (13:24 IST)
ಮೂವರು ಇಂಜಿನಿಯರ್ ಮಿತ್ರರ ಗುಂಪು ಇನ್ನೊಂದು ಅಕೌಂಟಂಟ್‌ಗಳ ಗುಂಪು ಬೇರೆ ಯಾವುದೋ ಒಂದು ಊರಿಗೆ ಹೋಗಬೇಕಾಗಿತ್ತು. ಸರಿ. ಅಕೌಂಟಂಟ್‌ಗಳು  ತಲಾ ಒಂದೊಂದು ಟಿಕೆಟ್ ತೆಗೆದುಕೊಂಡರು. ಇಂಜಿನಿಯರುಗಳು ಒಂದೇ ಟಿಕೆಟ್ ತೆಗೆದುಕೊಂಡು ರೈಲಿನಲ್ಲಿ ನುಗ್ಗಿದರು. ಅಕೌಂಟಂಟ್ ಫ್ರೆಂಡ್ಸ್ ಗ್ರೂಪ್‌ಗೆ "ಏನಪ್ಪಾ ಇದು... ಒಂದೇ ಟಿಕೆಟ್ನಲ್ಲಿ ಮೂವರು ಓಯ್ತಾವರೆ?" ಕುತೂಹಲ ಮುಚ್ಚಿಟ್ಟುಕೊಳ್ಳಲಿಕ್ಕಾಗಲಿಲ್ಲ.
 
"ಹೆಂಗ್ರಯ್ಯಾ ಇದು.. ಒಂದೇ ಟಿಕೆಟ್‌ಲ್ಲಿ ಮೂವರು"
 
"ಹೆಂಗಾ.. ನೋಡ್ತಾ ಇರಿ"
 
ಅಷ್ಟು ಹೇಳಿದವರೇ ಒಂದೇ ಟಾಯ್ಲೆಟ್ಟಿಗೆ ಮೂವರು ಇಂಜಿನಿಯರ್ ಮಿತ್ರರೂ ನುಗ್ಗಿ ಚಿಲಕ ಹಾಕಿಕೊಂಡು ಬಿಟ್ಟರು. ಹೊರಗೆ ಲೆಕ್ಕ ಪತ್ರ ಮಿತ್ರರು ಜಾದೂ ನೋಡುವಂತೆ ಮಿಕ ಮಿಕ ನೋಡ್ತಾ ಕುತ್ಕಂಡಿದ್ದರು.
ಟಿ.ಸಿ. ಬಂದ. ಎಲ್ಲ ಟಿಕೆಟ್ ಚೆಕ್ ಮಾಡ್ತಾ ಟಾಯ್ಲೆಟ್‌ನಲ್ಲಿ ಖದೀಮ ಇರಬೇಕು ಎಂದು  ಬಾಗಿಲು ಬಡಿದು ಟಿಕೆಟ್... ಅಂದ. ಒಂದಿಂಚು ಬಾಗಿಲು ತೆರೆದು ಸಂದಿಯೊಳಗಿಂದ ಟಿಕೆಟ್ ಹೊರಗೆ ಬಂತು. ನೋಡಿದ ಟಿಸಿ ಸುಮ್ಮನೆ ಮರಳಿದ.!
 
ಬಾಪರೇ, ನಾವು ಬರುವಾಗ ಇಂತಹ ಐಡಿಯಾ ಉಪಯೋಗಿಸಿದರೆ ದುಡ್ಡು ಉಳಿಯುತ್ತದೆ ಎಂದು  ಅಕೌಂಟಂಟ್ ಭೂಪರು ತೀರ್ಮಾನಿಸಿದ್ದಾಯಿತು. ಜಗತ್ತಿನಲ್ಲಿ ತಲೆ ಇದೆ... ಅದನ್ನು ಯಾವುದಕ್ಕಾದರೂ ಓಡಿಸಬೇಕು ಅನ್ನುವ ಮನಸ್ಸಿದ್ದರೆ ಅದು ದುಡ್ಡು ಉಳಿಸುವುದಕ್ಕಾಗಿ ಮಾತ್ರ.
"ಸರಿ" ಅಕೌಂಟಂಟ್‌ಗಳು ಒಂದೇ  ಟಿಕೆಟ್ ತೆಗೆದು ರೈಲು ಏರಿದರೆ, ತ್ರಿಮೂರ್ತಿ ಇಂಜಿನಿಯರುಗಳು ಟಿಕೆಟ್ ಇಲ್ಲದೆ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತರು. 
"ಟಿಕೆಟ್ ಇಲ್ಲದೆ ಹಾಂ? ಅಲ್ರಯ್ಯಾ ನೀವೇನು ಮನುಷ್ಯರಾ... ಬರುವಾಗ ಒಂದೇ... ಹೋಗುವಾಗ ಏನೂ ಇಲ್ಲ"
 
"ಜಸ್ಟ್‌ ವೈಟ್ ಆಂಡ್ ವಾಚ್"
ರೈಲು ಬಿಟ್ಟಿತು. ಅವರು ಒಂದು ಟಾಯ್ಲೆಟ್ ಇವರು ಇನ್ನೊಂದು ಟಾಯ್ಲೆಟ್‌ನಲ್ಲಿ ನುಸುಳಿಕೊಂಡರು. ಕೆಲಹೊತ್ತು ಕಳೆದ ಮೇಲೆ ಇಂಜಿನಿಯರ್ ಮಿತ್ರನೊಬ್ಬ ಹೊರಬಂದು ಅಕೌಂಟಂಟ್‌ಗಳ ಬಾಗಿಲು ಬಡಿದು ಟಿಕೆಟ್ ಎಂದ.... 
ಮುಂದೆ ಏನಾಯಿತು ಅಂತ ವಿಚಾರ ಮಾಡಿ...
 

ವೆಬ್ದುನಿಯಾವನ್ನು ಓದಿ