ಸರಕಾರದ ತಪ್ಪು ನಿರ್ಧಾರ ಕನ್ನಡಕ್ಕೆ ಹಿನ್ನಡೆ: ದೊರೆಸ್ವಾಮಿ

ಶನಿವಾರ, 5 ಫೆಬ್ರವರಿ 2011 (17:42 IST)
ಸರಕಾರದ ತಪ್ಪು ನಿರ್ಧಾರಗಳಿಂದ ನ್ಯಾಯಾಲಯಗಳಲ್ಲೂ ಕನ್ನಡಕ್ಕೆ ಹಿನ್ನಡೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಇಂತಹ ಸನ್ನಿವೇಶಗಳಿಂದ ಕೋರ್ಟ್‌ಗಳೂ ಕೂಡ ಇಂಗ್ಲಿಷ್ ಮಾಧ್ಯಮವನ್ನು ಬೆಂಬಲಿಸುವಂತಾಗಿದೆ ಎಂದು ವಿಷಾದಿಸಿದರು.

ನಗರದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ವೇದಿಕೆಯಲ್ಲಿ 77ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ 2ನೆ ದಿನವಾದ ಶನಿವಾರ ಗೋಷ್ಠಿಯಲ್ಲಿ ತಮ್ಮ ಆಶಯ ನುಡಿಗಳನ್ನಾಡಿದ ಅವರು, ಇಂಗ್ಲಿಷ್ ಶಾಲೆಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಇಂಗ್ಲಿಷರು ಭಾರತದಲ್ಲಿ ಇಲ್ಲದಿದ್ದರೂ ಇಂಗ್ಲಿಷ್ ನಮ್ಮನ್ನು ಆಳುತ್ತಿದೆ. ಇಲ್ಲಿ ಕನ್ನಡ ಕಡ್ಡಾಯವಾಗಬೇಕು, ಕನ್ನಡವನ್ನು ಎಲ್ಲರೂ ಕಲಿಯಬೇಕು. ಮಸಿ ಬಳಿದು, ಕಲ್ಲು ಹೊಡೆದು ಕನ್ನಡ ಕಲಿಸಲು ಸಾಧ್ಯವಿಲ್ಲ. ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸುವ ಮತ್ತು ಕನ್ನಡ ಕಲಿಯಬೇಕಾದ ರೀತಿ ನೀತಿಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ಕುದುರೆ, ಜೂಜು, ಲೈವ್ ಬ್ಯಾಂಡ್, ಲಾಟರಿ, ನೈಟ್ ಕ್ಲಬ್, ಮದ್ಯ ಇವುಗಳಿಂದ ಬೆಂಗಳೂರನ್ನು ಮುಕ್ತವನ್ನಾಗಿಸಿ ಸರ್ವೋದಯ ನಗರವನ್ನಾಗಿ ನಿರ್ಮಾಣ ಮಾಡಬೇಕೆಂದು ಹೇಳಿದರು. ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸ್ಥಾನಗಳನ್ನು ಕಲ್ಪಿಸಬೇಕೆಂದು ದೊರೆಸ್ವಾಮಿ ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ