ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಈ ಉದ್ಯಮಿಗಳಿಂದ ಆಕ್ಷೇಪ

Krishnaveni K

ಬುಧವಾರ, 17 ಜುಲೈ 2024 (14:28 IST)
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ.100 ಉದ್ಯೋಗ ಮೀಸಲಾತಿ ನೀಡುವ ಮಸೂದೆಗೆ ಅನುಮೋದನೆ ನೀಡುತ್ತಿದ್ದಂತೇ ಇತ್ತ ಕೆಲವು ಉದ್ಯಮಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಖಾಸಗಿ ಕಾರ್ಖಾನೆಗಳು, ಸಂಸ್ಥೆಗಳಲ್ಲಿ ಮ್ಯಾನೇಜ್ ಮೆಂಟ್ ಹಂತದಲ್ಲಿ ಶೇ.50, ಮ್ಯಾನೇಜ್ ಮೆಂಟ್ ಹೊರತಾದ ಹುದ್ದೆಗಳಲ್ಲಿ ಶೇ. 75 ಮತ್ತು ಸಿ ಮತ್ತು ಡಿ ವರ್ಗದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಪಾಸ್ ಮಾಡಲಾಗಿದೆ. ಆದರೆ ಇದು ಕೆಲವು ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉದ್ಯಮಿ ಮೋಹನ್ ದಾಸ್ ಪೈ, ‘ಉದ್ಯೋಗ ಮೀಸಲಾತಿ ನೀಡುವುದು ಎಂದರೆ ಈ ರೀತಿ ಅಲ್ಲ. ಕನ್ನಡಿಗರಿಗೆ ಹೆಚ್ಚು ಅವಕಾಶ ನೀಡಬೇಕು ಎಂದು ನಿಮಗೆ ನಿಜವಾಗಿಯೂ ಮನಸ್ಸಿದ್ದರೆ ಕನ್ನಡಿಗರ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ, ಉದ್ಯೋಗ ಕೌಶಲ್ಯತೆ ಹೆಚ್ಚಿಸುವ ತರಬೇತಿ ನೀಡಿ. ಅದು ಬಿಟ್ಟು ಹೀಗೆ ಏಕಾಏಕಿ ಮೀಸಲಾತಿ ಎಂದು ಘೋಷಿಸುವುದಲ್ಲ. ಇದದರಿಂದ ನೀವು ಏನು ಸಾಧಿಸಿದಂತಾಗುತ್ತದೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಕನ್ನಡಿಗರಿಗೆ ಮೀಸಲಾತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕೆಲವೊಂದು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ‘ಟೆಕ್ ಹಬ್ ಆಗಿರುವ ಬೆಂಗಳೂರಿನಂತಹ ನಗರದಲ್ಲಿ ನಮಗೆ ಕೌಶಲ್ಯವಿರುವ ಉದ್ಯೋಗಿಗಳು ಬೇಕು. ಸ್ಥಳೀಯರಿಗೆ ಉದ್ಯೋಗ ನೀಡುವ ಭರದಲ್ಲಿ ತಂತ್ರಜ್ಞಾನದಲ್ಲಿ ನಾವು ಇರುವ ಸ್ಥಾನಕ್ಕೆ ಧಕ್ಕೆಯಾಗಬಾರದು. ಈ ಮೀಸಲಾತಿ ನಿಯಮದಿಂದ ಕೆಲವು ವಿಶೇಷ ಕೌಶಲ್ಯ ಅಗತ್ಯವಿರುವ ಉದ್ದಿಮೆಗಳನ್ನು ಹೊರಗಿಡಬಹುದಿತ್ತು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ