ನೀವು ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರೇ, ನಿಮಗೊಂದು ಶುಭಸುದ್ದಿ,

ಗುರುಮೂರ್ತಿ

ಶುಕ್ರವಾರ, 2 ಫೆಬ್ರವರಿ 2018 (16:25 IST)
ರಾಯಲ್ ಎನ್‌ಫೀಲ್ಡ್ ಹೆಸರು ಕೇಳಿದೊಡನೆ ನೆನಪಾಗುವುದು ಅದರ ಸೌಂಡ್ ಮತ್ತು ವಿಂಟೇಜ್ ಲೂಕ್,‌‌ ಹೌದು ಕಾಲೇಜಿನ ನವಯುವಕರಿಂದ ಹಿಡಿದು ವಯಸ್ಸಾದ ಅಂಕಲ್‌ವರೆಗೂ ಈ ಬೈಕ್ ಹುಟ್ಟಿಸಿದ ಕ್ರೇಸ್ ಅಷ್ಟಿಷ್ಟಲ್ಲ. ತನ್ನ ವಿಭಿನ್ನವಾದ ವಿನ್ಯಾಸ ಮತ್ತು ಹಳೆಯ ಮಾದರಿಯ ಲೂಕ್ ನೊಂದಿಗೆ ಇಂದಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ಸ್ಪೋರ್ಟ್ಸ ಬೈಕ್‌ಗಳಿಗೆ ಸವಾಲೆಸೆದು ಮುನ್ನುಗ್ಗುತ್ತಿರುವ ದೇಸಿ ಬ್ರಾಂಡ್ ಎಂಬ ಖ್ಯಾತಿಯನ್ನು ರಾಯಲ್ ಎನ್‌ಫೀಲ್ಡ್ ಹೊಂದಿದೆ ಎಂದರೆ ತಪ್ಪಾಗಲಾರದು.
 
ರಾಯಲ್‌ ಎನ್‌ಫೀಲ್ಡ್ ತನ್ನ ಗ್ರಾಹಕರಿಗಾಗಿ ನೂತನ ಆವೃತ್ತಿಯನ್ನು ಪರಿಚಯಿಸಲು ಮುಂದಾಗಿದ್ದು ಅದು ಹೇಗಿದೆ ಅದರ ವಿಶೇಷತೆಗಳೇನು ಎಂಬುದು ನಿಮಗಾಗಿ ಇಲ್ಲಿದೆ. ಇತ್ತಿಚಿಗೆ ಕ್ಲಾಸಿಕ್ 350 ಮತ್ತು ಮಾದರಿಯ ಬೈಕ್‌ಗಳನ್ನು ರೂಪಾಂತರಿಸಿ ಜನಮನ್ನಣೆ ಗಳಿಸಿಕೊಂಡಿದ್ದ ರಾಯಲ್ ಎನ್‌ಫೀಲ್ಡ್ ತನ್ನ ಗ್ರಾಹಕರಿಗಾಗಿ ಹೊಸ ಮಾದರಿಯ ಬೈಕ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇತ್ತೀಚಿಗೆ ನೆಡೆದ 2017 ಮಿಲಾನ್ ಮೋಟಾರ್ ಪ್ರದರ್ಶನದಲ್ಲಿ (EICMA) ಎರಡು ಶಕ್ತಿಶಾಲಿ ಟ್ವಿನ್ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಿದ್ದು, ಅದರ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿ ಈ ಎರಡು ಬೈಕ್‌ಗಳಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಮುಂದಾಗುತ್ತಿವೆ.
 
ಕಾಂಟಿನೆಂಟಲ್ ಜಿಟಿ 650
ಕೆಫೆ ರೇಸರ್ ಮಾದರಿಯಲ್ಲಿ ಕಾಂಟಿನೆಂಟಲ್ ಜಿಟಿ 650 ಮಾದರಿಯನ್ನು ರಾಯಲ್ ಎನ್‌ಫೀಲ್ಡ್ ಸಂಸ್ಧೆ ಬಿಡುಗಡೆಗೊಳಿಸಿದ್ದು ತನ್ನ ನೂತನ ಮಾದರಿಯಲ್ಲಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಎಂದೇ ಹೇಳಬಹುದು. ಆಕರ್ಷಕ ವಿನ್ಯಾಸ ಉತ್ತಮ ಗ್ರಾಫಿಕ್ಸ್‌ಗಳನ್ನು ಹೊಂದಿರುವ ಆವೃತ್ತಿಯು ಹಳೆಯ ಕಾಲದ ಕೆಫೆ ರೇಸರ್‌ ಬೈಕ್‌ಗಳನ್ನು ನೆನಪಿಸುತ್ತದೆ ಎಂದರೆ ತಪ್ಪಾಗಲಾರದು.
 
ಕಾಂಟಿನೆಂಟಲ್ ಜಿಟಿ 650 ಬೈಕ್‌ 648 ಸಿಸಿ ಪ್ಯಾರಲಲ್ ಟ್ವಿನ್, ಏರ್ ಕೂಲ್ಡ್ ಮಾದರಿಯ 4 ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದ್ದು 47 bhp @ 7100 rpm ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 6 ಗೇರ್ ಬಾಕ್ಸ್‌ಗಳಿದ್ದು ಡಿಜಿಟಲ್ ಸ್ಪಾರ್ಕ್ ಇಗ್ನಿಷನ್ - TCI ಅನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಇದರ ಮುಂದಿನ ಸಸ್ಪೆನ್‌ಶನ್ ಉತ್ತಮವಾಗಿದ್ದು, 41 ಎಂಎಂ ಪ್ರಂಟ್ ಪಾರ್ಕ್,110 ಎಂಎಂ ಟ್ರಾವೆಲ್ ಮತ್ತು ಹಿಂಬದಿಯಲ್ಲಿ ಟ್ವಿನ್ ಕಾಯಿಲ್ ಕವರ್ ಶಾಕ್ಸ್‌, 88 ಎಂಎಂ ಟ್ರಾವೆಲ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಬೈಕ್‌ ಉದ್ದವು 2122 ಎಂಎಂ ಇದ್ದು ಎತ್ತರ 1024 ಎಂಎಂ ಆಗಿದೆ. ಈ ಬೈಕ್‌ 174 ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, 12.5 ಲೀಟರ್‌ನಷ್ಟು ಇಂಧನ ಸಂಗ್ರಹಣ ಸಾಮರ್ಥ್ಯ ಇದರಲ್ಲಿದೆ. ಇದರಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದ್ದು ಈ ಬೈಕಿನ ಎರಡು ಚಕ್ರಗಳಲ್ಲಿ ಎಬಿಎಸ್ ತ್ರಂತ್ರಜ್ಞಾನವನ್ನು ಹೊಂದಿರುವ ಡಿಸ್ಕ್‌ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಇದರ ಬೆಲೆ ದೇಶಿಯ ಮಾರುಕಟ್ಟೆಯಲ್ಲಿ ಇದರ ಎಕ್ಸ್‌ ಶೋ ರೂಂ ಬೆಲೆ 4.25 ಲಕ್ಷವಿರಬಹುದು ಎಂದು ಅಂದಾಜಿಸಲಾಗಿದೆ.
 
ಇಂಟರ್ಸೆಪ್ಟರ್ 650
ರಾಯಲ್ ಎನ್‌ಫೀಲ್ಡ್ ಮಾದರಿಗಳಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ ಎಂಬುದಕ್ಕೆ ಈ ಬೈಕ್ ಸಾಕ್ಷಿ ಎಂದೇ ಹೇಳಬಹುದು ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್ ಬೈಕ್‌ಗಳು ಲಗ್ಗೆ ಇಡುತ್ತಿದ್ದರೂ ರಾಯಲ್ ಎನ್‌ಫೀಲ್ಡ್ ಮಾತ್ರ ಕ್ಲಾಸಿಕ್ ಮಾದರಿಗಳನ್ನೇ ಅನುಸರಿಸಿ ತನ್ನದೇ ಆದ ಗ್ರಾಹಕ ವಲಯವನ್ನು ಮಾರುಕಟ್ಟೆಯಲ್ಲಿ ಸೃಷ್ಟಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಈ ಬೈಕ್ ನೋಡಲು ತುಂಬಾ ಆಕರ್ಷಕವಾಗಿದ್ದು ಇದು ಯಮಹಾದ ಹಳೆಯ ಆವೃತ್ತಿಯಾದ RD 350 ಮಾದರಿಯನ್ನು ಮತ್ತೊಮ್ಮೆ ನೆನಪಿಗೆ ತರುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಇದರ ಬಾಹ್ಯ ನೋಟವು ತುಂಬಾ ಆಕರ್ಷಕವಾಗಿದ್ದು, ಇದರ ಹೆಡ್‌ಲ್ಯಾಂಪ್ ಬೈಕ್‌ನ ಅಂದವನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ. ಇದು 648 ಸಿಸಿ ಪ್ಯಾರಲಲ್ ಟ್ವಿನ್, ಏರ್ ಕೂಲ್ಡ್ ಮಾದರಿಯ 4 ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದ್ದು, 47.65 PS @ 7100 rpm ನಷ್ಟು ಶಕ್ತಿಯನ್ನು ಇದು ಉತ್ಪಾದಿಸಬಲ್ಲದು. ಪೆಟ್ರೋಲ್ ಮೂಲಕ ಕಾರ್ಯ ನಿರ್ವಹಿಸುವ ಈ ಬೈಕ್‌ನಲ್ಲಿ 6 ಗೇರ್‌ಬಾಕ್ಸ್‌ಗಳಿದ್ದು ಕಾಂಟಿನೆಂಟಲ್ ಜಿಟಿ 650 ಆವೃತ್ತಿಯಲ್ಲಿರುವಂತೆ ಇದರಲ್ಲೂ ಸಹ ಡಿಜಿಟಲ್ ಸ್ಪಾರ್ಕ್ ಇಗ್ನಿಷನ್ - TCI ಅನ್ನು ಅಳವಡಿಸಲಾಗಿದೆ. ಇದರಲ್ಲಿ ಕೂಡಾ ಮುಂದೆ ಮತ್ತು ಹಿಂಬದಿಯಲ್ಲಿ ಡಿಸ್ಕ್ ಬ್ರೇಕ್‌ಗಳಿದ್ದು ಅದು ಎಬಿಎಸ್ ತ್ರಂತ್ರಜ್ಞಾನವನ್ನು ಒಳಗೊಂಡಿದೆ. ಇದರ ಚೆಸ್ ಕುರಿತು ಹೇಳುವುದಾದರೆ ಇದು ಸ್ಟೀಲ್ ಟ್ಯೂಬುಲರ್, ಡಬಲ್ ಕ್ರ್ಯಾಡಲ್‌ ಫ್ರೇಮ್ ಅನ್ನು ಹೊಂದಿದ್ದು, ಇದರ ಸಸ್ಪೆನ್‌ಶನ್ ಟ್ವೀನ್ ಕಾಯಿಲ್-ಓವರ್ ಶಾಕ್ಸ್‌ ಅನ್ನು ಒಳಗೊಂಡಿದೆ. ಟ್ಯೂಬ್‌ಲೈಸ್ ಟಯರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಈ ಬೈಕ್ 200 ಕೇಜಿ ಭಾರವಿದೆ. ಅಷ್ಟೇ ಅಲ್ಲ ಈ ಬೈಕ್‌ನ ಎತ್ತರ 1024 ಎಂಎಂ ನಷ್ಟಿದ್ದು ಉದ್ದವು 2122 ಎಂಎಂ ಇದೆ. ಅಲ್ಲದೇ ಈ ಬೈಕ್‌ನಲ್ಲಿ ನಾವು ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕಾಣಬಹುದಾಗಿದೆ. ಮೂಲಗಳ ಪ್ರಕಾರ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 3.5 ಲಕ್ಷವೆಂದು ಅಂದಾಜಿಸಲಾಗಿದೆ.
 
ದೇಶಿಯ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ನೂತನ ಬೈಕ್‌ಗಳಾದ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಅನ್ನು ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಕೆಲವು ಮೂಲಗಳ ಪ್ರಕಾರ ಈಗಾಗಲೇ ಬುಕಿಂಗ್ ಪ್ರಕಿಯೆಯನ್ನು ಕೂಡಾ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಎರಡು ಬೈಕ್‌ಗಳು ಬಾರಿ ಕೂತುಹಲವನ್ನು ಮೂಡಿಸಿದ್ದು ಈಗಾಗಲೇ ಮಾರುಕಟ್ಟೆಯಲ್ಲಿರುವ ಇತರ ಸ್ಪೋರ್ಟ್ ಬೈಕ್‌ಗಳಿಗೆ ತೀವ್ರ ಪೈಫೋಟಿ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ