ಮಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಪದ್ಮಜಾ ರಾವ್ ಗೆ 3 ತಿಂಗಳು ಜೈಲು ಮತ್ತು 40 ಲಕ್ಷ ರೂ. ದಂಡ ವಿಧಿಸಿ ಮಂಗಳೂರಿನ ಜೆಎಂಎಫ್ ಸಿ ಕೋರ್ಟ್ ತೀರ್ಪು ನೀಡಿದೆ.
ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ಪದ್ಮಜಾ ರಾವ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ತನ್ನಿಂದ 41 ಲಕ್ಷ ರೂ. ಪಡೆದು ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಆ ಪ್ರಕರಣ ಸಂಬಂಧ ಈಗ ಕೋರ್ಟ್ ತೀರ್ಪು ಪ್ರಕಟಿಸಿದೆ.
2021 ರಲ್ಲಿ ಪದ್ಮಜಾ ವಿರುದ್ಧ ವೀರೇಂದ್ರ ಶೆಟ್ಟಿ ದೂರು ದಾಖಲಿಸಿದ್ದರು. ತುಳು ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ಪದ್ಮಜಾ ಮತ್ತು ವೀರೇಂದ್ರ ಶೆಟ್ಟಿ ಪರಸ್ಪರ ಪರಿಚಿತರಾಗಿದ್ದರು. ಬಳಿಕ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಪದ್ಮಜಾ ಹಂತ ಹಂತವಾಗಿ ಸುಮಾರು 41 ಲಕ್ಷ ರೂ. ಸಾಲ ಪಡೆದಿದ್ದರು.
ಸಾಲದ ಭದ್ರತೆಗೆಂದು 40 ಲಕ್ಷ ರೂ.ಗಳ ಚೆಕ್ ನೀಡಿದ್ದರು. ಆದರೆ ಪದ್ಮಜಾ ಸಾಲ ಹಿಂದಿರುಗಿಸಿರಲಿಲ್ಲ. ಅವರು ಕೊಟ್ಟ ಚೆಕ್ ಬ್ಯಾಂಕ್ ಗೆ ಹಾಕಿದಾಗ ಖಾತೆಯಲ್ಲಿ ಹಣವೂ ಇರಲಿಲ್ಲ. ಈ ಪ್ರಕರಣದ ವಾದ-ವಿವಾದ ಆಲಿಸಿದ ನ್ಯಾಯಾಲಯ ಈಗ ಪರಿಹಾರ್ಥವಾಗಿ 40,20,000 ರೂ. ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆ ತೀರ್ಪು ಪ್ರಕಟಿಸಿದೆ.