ಡಿವೋರ್ಸ್ ಬೆನ್ನಲ್ಲೇ ಮತ್ತೇ ಹಸೆಮಣೆ ಏರಿದ್ರಾ ಜಯಂ ರವಿ, ಪೋಟೋ ಹಿಂದಿನ ಅಸಲಿಯತ್ತೇನು

Sampriya

ಭಾನುವಾರ, 6 ಅಕ್ಟೋಬರ್ 2024 (15:03 IST)
Photo Courtesy X
ಮಾಜಿ ಪತ್ನಿ ಆರತಿ ಅವರಿಗೆ ಡಿವೋರ್ಸ್ ನೀಡಿದ ಬೆನ್ನಲ್ಲೇ ಖ್ಯಾತ ನಟ ಜಯಂ ರವಿ ಮತ್ತೇ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರಬಿಂದುವಾಗಿದ್ದಾರೆ. ಮೊದಲು ಜಯಂ ರವಿ ಅವರು ಸಾಮಾಜಿಕ ಜಾಲತಾಣದಲ್ಲಿ ಆರತಿ ಅವರೊಂದಿಗೆ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಘೋಷಣೆ ಮಾಡಿದರು. ಇದರ ಬೆನ್ನಲ್ಲೇ ಆರತಿ ಅವರು ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ನನಗೂ ಹಾಗೂ ನನ್ನ ಮಕ್ಕಳಿಗೂ ಅನ್ಯಾಯವಾಗಿದೆ ಎಂದು ಆರೋಪ ಮಾಡಿದ್ದರು.

 ಇದಕ್ಕೆ ಪ್ರತಿಕ್ರಿಯಿಸಿದ ಜಯಂ ರವಿ ಅವರು ಮನೆಯಲ್ಲಿ ನನಗೆ ಕಿಂಚಿತ್ತೂ ಗೌರವವಿಲ್ಲ ಮತ್ತು ನನ್ನ ಜೀವನ ನಾಯಿಗಿಂತ ಕಡೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಇದರ ನಡುವೆ ಇದೀಗ ಜಯಂ ರವಿ ಅವರು ನಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಯಂ ರವಿ ಮತ್ತು ನಟಿ ಪ್ರಿಯಾಂಕಾ ಮೋಹನ್‌ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಅಭಿಮಾನಿಗಳಲ್ಲಿ ಗೊಂದಲದ ಅಲೆಗೆ ಕಾರಣವಾಯಿತು. ಚಿತ್ರದಲ್ಲಿ, ಇಬ್ಬರು ಮದುವೆಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಯಂ ರವಿ ಸಿಲ್ಕ್ ಕುರ್ತಾ ಮತ್ತು ಧೋತಿ ಧರಿಸಿದ್ದರೆ, ಪ್ರಿಯಾಂಕಾ ಮೋಹನ್ ಗುಲಾಬಿ ಬಣ್ಣದ ಸೀರೆಯಲ್ಲಿದ್ದರು, ಇಬ್ಬರೂ ಹೂಮಾಲೆಯಿಂದ ಅಲಂಕರಿಸಿದ್ದರು.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಚ್ಛೇದನವನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಜಯಂ ರವಿ ಅವರು ಹೊಸ ಸಂಬಂಧಕ್ಕೆ ವೇಗವಾಗಿ ತೆರಳಿದ್ದಾರೆಯೇ ಎಂದು ಪ್ರಶ್ನೆಯನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ.

ಆದರೆ ಅಸಲಿಯತ್ತೇ ಬೇರೆಯಿದೆ. ವೈರಲ್​ ಆಗಿರುವ ಫೋಟೋ ಪ್ರಿಯಾಂಕಾ ಮೋಹನ್ ಮತ್ತು ಜಯಂ​ ರವಿ ಅವರ ಹೊಸ ಚಿತ್ರದ ಫೋಟೋ ಆಗಿದೆ. ಇದು ಬ್ರದರ್ ಸಿನಿಮಾದ ಫೋಟೋ. ಈ ಸಿನಿಮಾವನ್ನು ಎಂ. ರಾಜೇಶ್ ಅವರು ನಿರ್ದೇಶಿಸಿದ್ದಾರೆ. 2022ರ ಆಗಸ್ಟ್​ ತಿಂಗಳಲ್ಲಿ ಈ ಚಿತ್ರ ಘೋಷಣೆಯಾಯಿತು. ಈ ಚಿತ್ರಕ್ಕಾಗಿ ಮಾಡಿಸಿದ್ದ ಫೋಟೋಶೂಟ್​ ಇಂದು ವೈರಲ್​ ಆಗುತ್ತಿದೆ. ಅಂದರೆ, ಈ ಸಿನಿಮಾ ಅಕ್ಟೋಬರ್ 31 ರಂದು ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ