ಹೈದರಾಬಾದ್: ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂಬ ಕಾರಣಕ್ಕೆ ನಿನ್ನೆ ಬಂಧಿತರಾಗಿದ್ದ ನಟ ಅಲ್ಲು ಅರ್ಜುನ್ ಇಂದು ಮುಂಜಾನೆಯೇ ಬಿಡುಗಡೆಯಾಗಿದ್ದಾರೆ.
ನಿನ್ನೆ ನಟ ಅಲ್ಲು ಅರ್ಜುನ್ ರನ್ನು ಅವರ ನಿವಾಸಕ್ಕೆ ತೆರಳಿ ಪೊಲೀಸರು ಬಂಧಿಸಿದ್ದರು. ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ಪೊಲೀಸರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ ಒಂಭತ್ತು ದಿನ ಕಳೆದ ಮೇಲೆ ಅರೆಸ್ಟ್ ಮಾಡುವುದರ ಔಚಿತ್ಯವೇನು ಎಂದು ಕೆಲವರು ಪ್ರಶ್ನೆ ಮಾಡಿದ್ದರು.
ಈ ನಡುವೆ ನಿನ್ನೆ ಬಂಧನದ ಬಳಿಕ ಪೊಲೀಸರು ಅವರನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ಅದಾದ ಬಳಿಕ ಕೋರ್ಟ್ ಅಲ್ಲು ಅರ್ಜುನ್ ರನ್ನು ಚಂಚಲಗುಡ ಜೈಲಿಗೆ ಕಳುಹಿಸಲಾಗಿತ್ತು. ಇದರ ಮಧ್ಯೆಯೇ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ ನಿನ್ನೆ ತಡವಾಗಿದ್ದರಿಂದ ರಾತ್ರಿಯಿಡೀ ಅಲ್ಲು ಜೈಲಿನಲ್ಲಿ ಕಳೆದರು.
ಇಂದು ಮುಂಜಾನೆಯೇ ಆದೇಶ ಪ್ರತಿ ಪಡೆದು ಜೈಲಿನಿಂದ ಅವರನ್ನು ರಿಲೀಸ್ ಮಾಡಲಾಗಿದೆ. ಇಂದು ರಿಲೀಸ್ ಆದ ಬೆನ್ನಲ್ಲೇ ಅಭಿಮಾನಿಗಳು, ಕುಟುಂಬದವರಿಗೆ ಧನ್ಯವಾದ ಸಲ್ಲಿಸಿದ ಅಲ್ಲು ಅರ್ಜುನ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅವರನ್ನು ರಿಲೀಸ್ ಮಾಡಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಒಂದು ವೇಳೆ ನಿನ್ನೆ ಜಾಮೀನು ಸಿಗದೇ ಹೋಗಿದ್ದರೆ ಸೋಮವಾರದವರೆಗೂ ಅಲ್ಲು ಅರ್ಜುನ್ ಜೈಲಿನಲ್ಲಿ ಕಾಲ ಕಳೆಯಬೇಕಾಗಿತ್ತು. ಇದಾದ ಬಳಿಕವಷ್ಟೇ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿ ಜಾಮೀನು ಪಡೆಯಬಹುದಿತ್ತು.