ಕೇರಳ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿರುವ ಹಿರಿಯ ನಟ ಸಿದ್ದಿಕ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ರೇವತಿ ಸಂಪತ್ ಆರೋಪಿಸಿದ್ದಾರೆ.
ಪಿಯುಸಿ ಮುಗಿದ ಬಳಿಕ ನನಗೆ ಭಯಾನಕ ಅನುಭವವಾಗಿದೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ನನಗೆ ಫೇಸ್ ಬುಕ್ ನಲ್ಲಿ ಸಂದೇಶ ಕಳುಹಿಸಿದ್ದರು. ಸಿನಿಮಾದ ಚರ್ಚೆಗೆ ಕರೆದಿದ್ದರು. ಚರ್ಚೆಯ ವೇಳೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈಗ ಅವರು ತೋರಿಸುವ ಮುಖ ನಾನು ಅಂದು ನೋಡಿದ ಮುಖವಲ್ಲ ಎಂದು ನಟಿ ರೇವತಿ ದೂರಿದ್ದಾರೆ.
ತಾವು 21 ವರ್ಷದವಳಿದ್ದಾಗ ಈ ಘಟನೆ ನಡೆದಿರುವುದಾಗಿ ಹೇಳಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಸಿದ್ದಿಕ್ ರಾಜೀನಾಮೆ ನೀಡಿದ್ದು, ಕೇರಳ ಚಿತ್ರರಂಗದಲ್ಲಿ ಈ ಪ್ರಕರಣದ ಕುರಿತು ಸಂಚಲನ ಉಂಟಾಗಿದೆ.
ಹೇಮಾ ಸಮಿತಿ ವರದಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ಅವರು, ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಸಿದ್ದಿಕ್ ಮೊದಲು ತಮ್ಮನ್ನು ಮೋಲ್ ಎಂದು ಕರೆದರು. ಮೋಲ್ ಎಂಬುದನ್ನು ಕೇರಳದಲ್ಲಿ ಸಾಮಾನ್ಯವಾಗಿ ಚಿಕ್ಕ ಹುಡುಗಿ ಅಥವಾ ಮಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ ಎಂದು ತಿಳಿಸಿದರು.
ಸಿದ್ದಿಕ್ ಅವರನ್ನು ಕ್ರಿಮಿನಲ್ ಎಂದು ಕರೆದ ನಟಿ ರೇವತಿ, ಸಿದ್ದಿಕ್ ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ ಬಳಿಕ ನಾನು ತೀವ್ರ ಮಾನಸಿಕ ಆಘಾತ ಅನುಭವಿಸಿದೆ. ಇದು ನನ್ನ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿದೆ. ಘಟನೆಯ ಬಳಿಕ ಸಿದ್ದಿಕ್ ಏನೂ ಆಗಿಲ್ಲ ಎಂಬಂತೆ ವರ್ತಿಸಿ ನನ್ನ ಮುಂದೆ ಸಾಮಾನ್ಯ ಎಂಬಂತೆ ನಿಂತಿದ್ದರು ಎಂದು ಹೇಳಿದ್ದಾರೆ.
ಪರಿಸ್ಥಿತಿಯಿಂದ ಪಾರಾಗಲು ಓಡಿಹೋದೆ. ಆ ವಯಸ್ಸಿನಲ್ಲಿ ನಾನು ಸಾಧ್ಯವಾದಷ್ಟು ಉತ್ತಮವಾಗಿ ಪ್ರತಿಕ್ರಿಯಿಸಿದೆ. ನಾನು ಏನೂ ಮಾಡಲೂ ಸಾಧ್ಯವಿರಲಿಲ್ಲ. ಓಡಿಹೋಗಿ ಆಟೋ ಹತ್ತಿ ಪರಾರಿಯಾದೆ ಎಂದು ರೇವತಿ ಹೇಳಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಕೆಲಸದ ಪರಿಸ್ಥಿತಿಗಳು ಮತ್ತು ಲೈಂಗಿಕ ಶೋಷಣೆಯ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಗೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಶುಕ್ರವಾರ ಪ್ರತಿಕ್ರಿಯಿಸಿದೆ.