ಬಬ್ರೂ: ಒಂದು ಕಾರಿನಲ್ಲಿ ನೂರು ದಿಕ್ಕಿನ ಪಯಣ!

ಸೋಮವಾರ, 2 ಡಿಸೆಂಬರ್ 2019 (17:01 IST)
ಸುಮನ್ ನಗರ್ಕರ್ ನಿರ್ಮಾಣ ಮಾಡಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಬಬ್ರೂ ಚಿತ್ರ ಡಿಸೆಂಬರ್ 6ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಶೀರ್ಷಿಕೆಯಲ್ಲಿಯೇ ಅದೆಂಥಾದ್ದೋ ಆಕರ್ಷಣೆ ಇಟ್ಟುಕೊಂಡಿರೋ ಈ ಚಿತ್ರ ಈಗಾಗಲೇ ನಾನಾ ದಿಕ್ಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಂದು ಉತ್ಸಾಹಿ ಸಿನಿಮಾ ವ್ಯಾಮೋಹಿಗಳ ತಂಡ ಸೇರಿಕೊಂಡು ರೂಪಿಸಿರೋ ಬಬ್ರೂ ಭಿನ್ನವಾದ ಕಥೆಯ ಸಿನಿಮಾ ಅನ್ನೋದು ಟ್ರೇಲರ್ನೊಂದಿಗೆ ಎಲ್ಲರಿಗೂ ಮನದಟ್ಟಾಗಿದೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಾ ಅಲೆಯ ಸಿನಿಮಾಗಳ ಹಂಗಾಮಾ ಶುರುವಾಗಿದೆಯಲ್ಲಾ? ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವಂಥಾ ಹೊಸತನಗಳಿಂದ ಮೂಡಿ ಬಂದಿರುವ ಚಿತ್ರ ಬಬ್ರೂ.
ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್ನಗರ್ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಹಾಗಾದರೆ ಈ ಸಿನಿಮಾದ ಅಸಲೀ ಕಥೆಯೇನು, ಇಲ್ಲಿ ಯಾವ ಬಗೆಯ ಕಥಾನಕವಿದೆ ಎಂಬೆಲ್ಲ ವಿಚಾರಗಳು ಟ್ರೇಲರ್ನಲ್ಲಿನ ಸುಳಿವುಗಳ ಹೊರತಾಗಿಯೂ ಪ್ರೇಕ್ಷಕರನ್ನು ಕಾಡುತ್ತಿದೆ. ಈ ಕುರಿತಾಗಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಚಿತ್ರತಂಡ ತೆರೆದಿಟ್ಟಿದೆ.
ಬಹುಕಾಲದ ಬಳಿಕ ಬಬ್ರೂ ಮೂಲಕ ಬಣ್ಣ ಹಚ್ಚುತ್ತಿರುವ ಸುಮನ್ ನಗರ್ಕರ್ ವಿಭಿನ್ನವಾದೊಂದು ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಿಂದಿದ್ದಾರೆ. ಬಬ್ರೂವಿನ ಕಥೆ ಸುಮನ್ ನಗರ್ಕರ್ ನಟಿಸಿರೋ ಸನಾ ಎಂಬ ಪಾತ್ರ ಹಾಗೂ ಮಹಿ ನಿರ್ವಹಿಸಿರುವ ಅರ್ಜುನ್ ಎಂಬ ಪಾತ್ರಗಳ ಸುತ್ತ ತಿರುಗುವಂಥಾ ಕಥೆಯನ್ನೊಳಗೊಂಡಿದೆ. ಇಲ್ಲಿ ಸನಾ ಎಂಬ ಪಾತ್ರ ಗಂಡನಿಂದಲೇ ಕಿರುಕುಳಕ್ಕೊಳಗಾಗಿ ರಿಲೀಫು ಬಯಸುವ ಪಾತ್ರ. ಆಕೆ ಆ ಒತ್ತಡಗಳಿಂದ ಕಳಚಿಕೊಳ್ಳುವ ಸಲುವಾಗಿ ದೂರದ ಪ್ರದೇಶಕ್ಕೆ ಗೊತ್ತುಗುರಿ ಇಲ್ಲದ ಯಾನ ಹೊರಟಿರುತ್ತಾಳೆ. ಅರ್ಜುನ ಸೋಂಭೇರಿತನವನ್ನೇ ಹೊದ್ದುಕೊಂಡು ತಾನೂ ಕೂಡಾ ದಿಕ್ಕಿಲ್ಲದ ಪಯಣಕ್ಕಣಿಯಾಗುತ್ತಾನೆ. ಇವರಿಬ್ಬರ ಪಯಣಕ್ಕೆ ಸಿಗೋದು ಒಂದೇ ಕಾರು. ಹಾಗಿ ಅನಿವಾರ್ಯವಾಗಿ ಒಟ್ಟಿಗೆ ಪಯಣ ಹೊರಟ ಇವರಿಬ್ಬರನ್ನು ಅನಿರೀಕ್ಷಿತ ಘಟನಾವಳಿಗಳು ಎದುರುಗೊಳ್ಳುತ್ತವೆ. ಅದರಲ್ಲಿಯೇ ಈ ಕಥೆಯ ರೋಚಕ ಅಧ್ಯಾಯಗಳು ಅಡಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ