ಯುಗ ಕ್ರಿಯೇಷನ್ಸ್ ಹಾಗೂ ಸುಮನ್ನಗರ್ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ, ಸುಮನ್ ನಗರ್ಕರ್ ಮುಖ್ಯ ಪಾತ್ರದಲ್ಲಿಯೂ ನಟಿಸಿರುವ ಚಿತ್ರ ಬಬ್ರೂ. ಈಗಾಗಲೇ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಇದೇ ಡಿಸೆಂಬರ್ 6ರಂದು ತೆರೆಗಾಣಲಿದೆ.
ಸುಜಯ್ ರಾಮಯ್ಯ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕನ್ನಡಕ್ಕೆ ಹೊಸಾ ದಿಕ್ಕು ತೋರುವಂಥಾ ಚೆಂದದ ಕಥೆಯನ್ನೊಳಗೊಂಡಿರುವ ಸಿನಿಮಾ. ಇದರಲ್ಲಿ ರೋಚಕ ಜರ್ನಿಯೊಂದಿದೆ. ಸಂಸಾರ ತಾಪತ್ರಯದಿಂದ ನೊಂದು, ಬಸವಳಿದು ರಿಲ್ಯಾಕ್ಸಿಗಾಗಿ ಪಯಣದ ಹಾದಿ ಹುಡುಕೋ ಮಧ್ಯ ವಯಸ್ಕ ಮಹಿಳೆ ಮತ್ತು ಸೋಂಭೇರಿತನವನ್ನೇ ಬದುಕೆಂದುಕೊಂಡು ಜಾಲ ಮಾಡೋದರ ಮೂಲಕವೇ ಸಮಯ ಸವೆಸೋ ಜಾಯಮಾನದ ಹುಡುಗ ಒಂದೇ ಕಾರಲ್ಲಿ ಯಾನ ಹೊರಡೋ ಕಥೆ ಇಲ್ಲಿದೆ. ಆದರೆ ಆ ಕಾರೇ ಅವರಿಬ್ಬರಿಗೂ ಕಂಟಕ ತಂದೊಡ್ಡುತ್ತದೆ. ಅದೇನೆಂಬುದನ್ನು ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಬಬ್ರೂ ಮೂಲಕ ನಿರೂಪಿಸಲಾಗಿದೆ.
ಇಂಥಾ ರೋಚ ಜರ್ನಿ ಮೆಕ್ಸಿಕೋದಿಂದ ಕೆನಡಾ ವರೆಗೂ ಸಾಗುತ್ತದೆ. ಇದೊಂದು ಮಹಾ ಪ್ರಯಾಣ. ಯಾಕೆಂದರೆ ಮೆಕ್ಸಿಕೋದಿಂದ ಕೆನಡಾಕ್ಕೆ 1503 ಕಿಲೋಮೀಟರ್ ದೂರವಿದೆ. ಈ ಕಥೆ ಈ ಹಾದಿಯುದ್ದಕ್ಕೂ ಬೆಚ್ಚಿ ಬೀಳಿಸುವಂಥಾ ತಿರುಗಳ ಮೂಲಕ ಮುಂದುವರೆಯುತ್ತದೆ. ಇಲ್ಲಿನ ಆಸು ಪಾಸಿನಲ್ಲಿರೋ ಬೆರಗಾಗಿಸುವಂಥಾ ಪ್ರದೇಶಗಳನ್ನು ಪ್ರೇಕ್ಷಕರಿಗೆ ತೋರಿಸುತ್ತಲೇ ಕಥೆಯ ನಿಗೂಢ ಬಚ್ಚಿಟ್ಟುಕೊಂಡು ಮುಂದುವರೆಯುತ್ತದೆ. ಅಮೆರಿಕದಲ್ಲಿ ಚಿತ್ರೀಕರಣವೆಂದರೆ ಕೆಲವೇ ಕೆಲ ಪ್ರದೇಶಗಳನ್ನು ಮಾತ್ರವೇ ಸಿನಿಮಾ ಮಂದಿ ಆರಿಸಿಕೊಳ್ಳುತ್ತಾರೆ. ಆದರೆ ಅಮೆರಿಕಾ ಸುತ್ತಮುತ್ತ ಇಂಥಾ ಪ್ರದೇಶಗಳೂ ಇವೆಯಾ ಎಂಬ ಅಚ್ಚರಿ ಹುಟ್ಟುವಂಥಾ ಪ್ರದೇಶಗಳನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆಯಂತೆ.