ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ದರ್ಶನ್ ಹಾಗೂ ಇತರೆ ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತಿಮವಾಗುತ್ತಿದೆ. ಇಂದು ಮತ್ತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಇಂದು ಮಧ್ಯಾಹ್ನ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸುತ್ತಾರೋ ಅಥವಾ ಮತ್ತೆ ಪೊಲೀಸ್ ಕಸ್ಟಡಿಗೆ ನೀಡುತ್ತಾರೋ ಎಂದು ತೀರ್ಮಾನವಾಗಲಿದೆ.
ಶನಿವಾರದಂದು ದರ್ಶನ್ ಮತ್ತು ಇತರರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ಮತ್ತಷ್ಟು ವಿಚಾರಣೆ ಅಗತ್ಯವಿರುವುದರಿಂದ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಲಾಗಿತ್ತು. ಇದೀಗ ಪೊಲೀಸರು ಸ್ಥಳ ಮಹಜರು, ಡಿಎನ್ ಎ ಟೆಸ್ಟ್ ಸೇರಿದಂತೆ ಎಲ್ಲಾ ರೀತಿಯ ವಿಚಾರಣೆಗಳನ್ನು ಮುಗಿಸಿದ್ದಾರೆ.
ಹೀಗಾಗಿ ಇಂದು ದರ್ಶನ್ ಮತ್ತು ಇತರೆ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆಯಿದೆ. ಜೂನ್ 11 ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದರು.