ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ ನಿನ್ನೆ ವೈರಲ್ ಆಗಿತ್ತು. ಇದೀಗ ದರ್ಶನ್ ಗೆ ಸಿಗುತ್ತಿರುವ ರಾಜಾತಿಥ್ಯದ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳುತ್ತಿವೆ.
ನಟ ದರ್ಶನ್ ನನಗೆ ಜೈಲೂಟ ಸರಿ ಬರುತ್ತಿಲ್ಲ, ಅಜೀರ್ಣವಾಗುತ್ತಿದೆ ಮನೆ ಊಟಕ್ಕೆ ಅವಕಾಶ ಕೊಡಿ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಜೈಲಿನಲ್ಲಿ ಸಿಗುತ್ತಿರುವ ಊಟೋಪಚಾರದ ಮೆನು ಕೇಳಿದರೆ ದರ್ಶನ್ ಗೆ ಇಷ್ಟೆಲ್ಲಾ ಸಿಕ್ಕಿದ ಮೇಲೆ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯವೇನು ಎಂಬ ಪ್ರಶ್ನೆ ಮೂಡಿದೆ.
ದರ್ಶನ್ ಗೆ ಸಹಾಯ ಮಾಡಿದ 7 ಜೈಲು ಸಿಬ್ಬಂದಿಗಳನ್ನು ಈಗ ಅಮಾನತು ಮಾಡಲಾಗಿದೆ. ಆದರೆ ಇದಕ್ಕೆ ಮೊದಲು ಜೈಲಿನಲ್ಲಿರುವ ರೌಡಿ ವಿಲ್ಸನ್ ಗಾರ್ಡನ್ ನಾಗ ಸಹಾಯದಿಂದ ದರ್ಶನ್ ತಮಗೆ ಬೇಕಾಗಿದ್ದನ್ನೆಲ್ಲಾ ತರಿಸಿಕೊಂಡು ಸೇವನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ದರ್ಶನ್ ಗೆ ಒಂದು ದಿನವೂ ಮಾಂಸಾಹಾರವಿಲ್ಲದೇ, ಸಿಗರೇಟು ಇಲ್ಲದೇ ಕಳೆಯುವುದು ಕಷ್ಟ. ಆದರೆ ಜೈಲಿನ ನಿಯಮ ಪ್ರಕಾರ ವಾರಕ್ಕೆ ಒಮ್ಮೆ ಮಾತ್ರ ಮಾಂಸದೂಟ ಸಿಗುತ್ತದೆ. ಆದರೆ ದರ್ಶನ್ ಗೆ ಪ್ರತಿನಿತ್ಯ ಶಿವಾಜಿ ನಗರ ಮಿಲಿಟ್ರಿ ಹೋಟೆಲ್ ನಿಂದಲೇ ಬಿರಿಯಾನಿ ಬರುತ್ತಿತ್ತು, ಜೊತೆಗೆ ಮದ್ಯವೂ ಸಿಗುತ್ತಿತ್ತು. ಇದೆಲ್ಲವನ್ನೂ ರೌಡಿ ನಾಗನೇ ಅರೇಂಜ್ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ಇಷ್ಟೆಲ್ಲಾ ರಾಜಾತಿಥ್ಯವಾದ ಮೇಲೆ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸುವುದು, ದರ್ಶನ್ ಗೆ ಪಶ್ಚಾತ್ತಾಪವಾಗಿದೆ, ಬೇಸರದಲ್ಲಿದ್ದಾರೆ ಎಂದೆಲ್ಲಾ ಬರುತ್ತಿರುವ ವರದಿಗಳೆಲ್ಲಾ ನಾಟಕವಲ್ಲವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.