ಗಟ್ಟಿಮೇಳ ಧಾರವಾಹಿಯ ಹಿರಿಯ ನಟಿ ಕಮಲಶ್ರೀಗೆ ಕ್ಯಾನ್ಸರ್: ಚಿಕಿತ್ಸೆಗೆ ನೆರವಾಗುತ್ತಿರುವವರು ಯಾರು

Krishnaveni K

ಶುಕ್ರವಾರ, 10 ಜನವರಿ 2025 (14:53 IST)
ಬೆಂಗಳೂರು: ಗಟ್ಟಿಮೇಳ ಧಾರವಾಹಿಯಲ್ಲಿ ಅಜ್ಜಿ ಪಾತ್ರ ಮಾಡುತ್ತಿದ್ದ ಹಿರಿಯ ನಟಿ ಕಮಲಶ್ರೀಗೆ ಕ್ಯಾನ್ಸರ್ ರೋಗ ತಗುಲಿದೆ ಎಂಬುದನ್ನು ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರಿಗೆ ಚಿಕಿತ್ಸೆಗೆ ನೆರವಾಗುತ್ತಿರುವವರು ಯಾರು ಎಂಬುದನ್ನೂ ತಿಳಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರವಾಹಿಯಲ್ಲಿ ಅಜ್ಜಿ ಪಾತ್ರವನ್ನು ನಿಭಾಯಿಸಿ ಕಮಲಶ್ರೀ ಮನೆ ಮಾತಾಗಿದ್ದರು. ಅವರು ಈ ವಯಸ್ಸಿನಲ್ಲೂ ದುಡಿಯಲೇ ಬೇಕಾದ ಅನಿವಾರ್ಯತೆ ಬಗ್ಗೆ ಜೀ ವೇದಿಕೆಯಲ್ಲೇ ಹೇಳಿಕೊಂಡು ಕಣ್ಣೀರು ಹಾಕಿದ್ದರು.

ಇದೀಗ ಕಮಲಶ್ರೀ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಂತೆ. ಇದನ್ನು ಯೂ ಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಗಟ್ಟಿಮೇಳ ಧಾರವಾಹಿ ನಿಂತ ಬೆನ್ನಲ್ಲೇ ಅವರು ಅನಾರೋಗ್ಯಕ್ಕೀಡಾಗಿದ್ದರಂತೆ. ಪರೀಕ್ಷಿಸಿದಾಗ ಸ್ತನ ಕ್ಯಾನ್ಸರ್ ಎಂದು ಗೊತ್ತಾಗಿದೆ.

ತಕ್ಷಣವೇ ಅವರು ಹಿರಿಯ ನಟಿ ಗಿರಿಜಾ ಲೋಕೇಶ್ ಗೆ ಕರೆ ಮಾಡಿದ್ದರಂತೆ. ಗಿರಿಜಾ ಲೋಕೇಶ್ ಒಬ್ಬ ವೈದ್ಯರನ್ನು ಸೂಚಿಸಿ ಅವರ ಬಳಿ ಹೋಗಿ ತೋರಿಸಿಕೊಳ್ಳುವಂತೆ ಹೇಳಿದ್ದರಂತೆ. ಬಳಿಕ ಹಿರಿಯ ನಟಿ ಉಮಾಶ್ರೀಗೆ ಕರೆ ಮಾಡಿದ್ದಾರೆ.

ಉಮಾಶ್ರೀ ಆಗ ಬೆಳಗಾವಿಯಲ್ಲಿದ್ದರು. ಆದರೆ ಅದೇ ದಿನ ಬೆಂಗಳೂರಿಗೆ ಬಂದ ಅವರು ತಾವೇ ಕಮಲಶ್ರೀಯವರನ್ನು ಕರೆದುಕೊಂಡು ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿ ಚಿಕಿತ್ಸೆ ಪಡೆದಿದ್ದಾರಂತೆ. ಆ ಖರ್ಚುಗಳನ್ನೆಲ್ಲಾ ಅವರೇ ನೋಡಿಕೊಂಡರು. ಅಷ್ಟೇ ಅಲ್ಲದೆ, ವೈದ್ಯರಿಗೂ ಅವರ ಬಳಿ ದುಡ್ಡು ತೆಗೆದುಕೊಳ್ಳಬೇಡಿ ಎಂದು ಸೂಚಿಸಿದ್ದಾರಂತೆ. ಸದ್ಯಕ್ಕೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಮಲಶ್ರೀ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿ ಆಪರೇಷನ್ ಮಾಡಿಸುವುದು ಕಷ್ಟ, ಕೀಮೋಥೆರಪಿಯೂ ತಡೆದುಕೊಳ್ಳಲಾಗಲ್ಲ ಎಂದು ವೈದ್ಯರು ಹೇಳಿದ್ದಾರಂತೆ. ಹೀಗಾಗಿ ಅವರು ದುಬಾರಿ ಬೆಲೆಯ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ.

ಖರ್ಚಿಗೆ ಈಗಲೂ ಗಿರಿಜಾ ಲೋಕೇಶ್, ಉಮಾಶ್ರೀ, ವೀಣಾ ವೆಂಕಟೇಶ್ ಸೇರಿದಂತೆ ಹಲವು ನಟಿಯರು ಆಗಾಗ ಹಣ ನೀಡುತ್ತಿದ್ದಾರಂತೆ. ಈಗ ಶೇ.60 ರಷ್ಟು ಗುಣಮುಖರಾಗಿರುವುದಾಗಿ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ