ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜಗ್ಗೇಶ್ ಗೆ ಒತ್ತಡ: ನವರಸನಾಯಕ ಹೇಳಿದ್ದೇನು ಗೊತ್ತಾ?
ಮಂಗಳವಾರ, 24 ಸೆಪ್ಟಂಬರ್ 2019 (09:00 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಈ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಲಿ ಎಂಬ ಒತ್ತಾಯ ಕೇಳಿಬರುತ್ತಿದ್ದು, ನವರಸನಾಯಕನೂ ಪರೋಕ್ಷವಾಗಿ ಅವಕಾಶ ಕೊಟ್ಟರೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಜಗ್ಗೇಶ್ ರನ್ನು ಮತ್ತೆ ಕಣಕ್ಕಿಳಿಸಲು ಕಾರ್ಯಕರ್ತರಿಂದಲೇ ಒತ್ತಾಯ ಕೇಳಿಬಂದಿದೆ ಎನ್ನಲಾಗಿದೆ. ಕಳೆದ ಬಾರಿ ಕಡೇ ಕ್ಷಣದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರೂ 60 ಸಾವಿರ ಮತ ಪಡೆಯಲು ಯಶಸ್ವಿಯಾಗಿದ್ದ ಜಗ್ಗೇಶ್ ರನ್ನು ಈ ಬಾರಿ ಪೂರ್ವ ತಯಾರಿಯೊಂದಿಗೆ ಕಣಕ್ಕಿಳಿಸಿದರೆ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಕಾರ್ಯಕರ್ತರದ್ದು.
ಈ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಜಗ್ಗೇಶ್, ಕಳೆದ ಬಾರಿ ಕಡೇ ಕ್ಷಣದಲ್ಲಿ ಅಭ್ಯರ್ಥಿ. ಈ ಬಾರಿ ವಲಸೆ ಬಂದವರಿಗಾಗಿ ನನ್ನ ಸೈಡ್ ಗೆ ನಿಲ್ಲಿಸುತ್ತಾರೋ, ಟಿಕೆಟ್ ಕೊಡುತ್ತಾರೋ ಗೊತ್ತಿಲ್ಲ. ಕಾಡಿನಲ್ಲಿ ಕಳೆದುಹೋದ ಮಗುವಿನಂತಾಗಿದ್ದೇನೆ ಎಂದು ಒಂದು ಟ್ವೀಟ್ ನಲ್ಲಿ ಹೇಳಿದರೆ ಇನ್ನೊಂದು ಟ್ವೀಟ್ ನಲ್ಲಿ ಬಾರದು ಬಪ್ಪುದು, ಬಪ್ಪದು ತಪ್ಪದು ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಜಗ್ಗೇಶ್ ಗೆ ಟಿಕೆಟ್ ಕೊಟ್ಟರೂ ಅಚ್ಚರಿಯಿಲ್ಲ.