ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ರಿಷಬ್ ಶೆಟ್ಟಿಯವರ ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ಅಪ್ ಡೇಟ್ ಕೊನೆಗೂ ಬಂದೇ ಬಿಟ್ಟಿದೆ. ಟ್ರೈಲರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಪ್ರಕಟಿಸಿದೆ.
ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ, ಜನರಲ್ಲಿ ಕಾಂತಾರ ಕ್ರೇಜ್ ಶುರುವಾಗಿದೆ. ಆದರೆ ಚಿತ್ರತಂಡದಿಂದ ಯಾವುದೇ ಅಪ್ ಡೇಟ್ ಇಲ್ಲ ಎಂದು ಅಭಿಮಾನಿಗಳಲ್ಲಿ ಬೇಸರವಿತ್ತು.
ಇದೀಗ ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಪ್ಟೆಂಬರ್ 22 ರಂದು 12.45 ಕ್ಕೆ ಟ್ರೈಲರ್ ಬಿಡುಗಡೆ ಮಾಡುತ್ತಿರುವುದಾಗಿ ಕಾಂತಾರ ಸಿನಿಮಾ ತಂಡ ಘೋಷಿಸಿದೆ.
ಕಾಂತಾರ ಅಧ್ಯಾಯ 1 ದರ್ಶನಕ್ಕೆ ಕ್ಷಣಗಣನೆ. ಇದೇ 22 ರಂದು ಮಧ್ಯಾಹ್ನ 12.45 ಕ್ಕೆ ಕಾಂತಾರ ಟ್ರೈಲರ್ ಬಿಡುಗಡೆ ಮಾಡಲಿದ್ದೇವೆ. ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ.