ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 2019 ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ. ಇದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.
2019 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ನಿನ್ನೆ ಘೋಷಣೆಯಾಗಿತ್ತು. ಕಿಚ್ಚ ಸುದೀಪ್ ಗೆ ಪೈಲ್ವಾನ್ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪ್ರಕಟವಾಗಿತ್ತು. ಅತ್ಯುತ್ತಮ ನಟ ಎನ್ನುವುದು ನಿಜಕ್ಕೂ ಉನ್ನತ ಪ್ರಶಸ್ತಿ. ಆದರೆ ಸುದೀಪ್ ಇದನ್ನು ನಿರಾಕರಿಸಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕಾರಣವನ್ನೂ ನೀಡಿದ್ದಾರೆ. ಗೌರವಾನ್ವಿತ ಕರ್ನಾಟಕ ಸರ್ಕಾರ ಮತ್ತು ತೀರ್ಪುಗಾರರಿಗೆ, ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಜಕ್ಕೂ ಗೌರವ ಎಂದುಕೊಂಡಿದ್ದೇನೆ, ಈ ಗೌರವ ನೀಡಿದ ತೀರ್ಪುಗಾರರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಆದರೆ ಕಳೆದ ಕೆಲವು ವರ್ಷಗಳಿಂದ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ನಾನು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸದೇ ಇರಲು ತೀರ್ಮಾನಿಸಿದ್ದೇನೆ. ಅದನ್ನು ಈ ವಿಚಾರದಲ್ಲೂ ಮುಂದುವರಿಸಲು ಬಯಸುತ್ತೇನೆ. ನನಗಿಂತ ಈ ಪ್ರಶಸ್ತಿಗೆ ಅರ್ಹವಾದ ಅನೇಕ ನಟರಿದ್ದಾರೆ. ನನಗಿಂತ ಅರ್ಹರಾದ ಬೇರೆ ನಟರಿಗೆ ಈ ಪ್ರಶಸ್ತಿ ಸಿಕ್ಕರೆ ನನಗೆ ಅತ್ಯಂತ ಸಂತೋಷವಾಗುತ್ತದೆ.
ಜನರನ್ನು ಯಾವುದೇ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೇ ಮನರಂಜಿಸುವುದೇ ನನ್ನ ಗುರಿಯಾಗಿರುತ್ತದೆ ಮತ್ತು ತೀರ್ಪುಗಾರರು ನನ್ನನ್ನು ಈ ಪ್ರಶಸ್ತಿಗೆ ಪರಿಗಣಿಸಿರುವುದೇ ದೊಡ್ಡ ಗೌರವ ಎಂದುಕೊಂಡಿದ್ದೇನೆ. ನನ್ನ ಈ ನಿರ್ಧಾರವನ್ನು ನೀವು ಪರಿಗಣಿಸುತ್ತೀರಿ ಎಂದುಕೊಂಡಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.