ಬೆಂಗಳೂರು: ಸಹನಟಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ನಟ ಮಡೆನೂರು ಮನು ತಮ್ಮ ಮೇಲಿನ ಪ್ರಕರಣ ರದ್ದುಗೊಳಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಎಲ್ಲವೂ ಒಪ್ಪಿಗೆಯ ಮೇರೆಯೇ ನಡೆದಿದ್ದು ಎಂದಿದ್ದಾರೆ.
ಸಂತ್ರಸ್ತೆ ಜೊತೆಗೆ ಮನು ರಿಯಾಲಿಟಿ ಶೋ ಒಂದರಲ್ಲಿ ಕೆಲಸ ಮಾಡಿದ್ದರು. ಇಬ್ಬರೂ ಒಂದೇ ಬಾಡಿಗೆ ಮನೆಯಲ್ಲಿ ಕೆಲ ವರ್ಷ ಜೊತೆಗಿದ್ದರು. ಇಬ್ಬರ ನಡುವೆ ನಡೆದಿದ್ದು ಸಮ್ಮತಿಯ ಲೈಂಗಿಕ ಸಂಪರ್ಕ. ಹೀಗಿರುವಾಗ ಮನು ವಿರುದ್ಧ ಧ್ವೇಷ ಸಾಧಿಸುವ ಉದ್ದೇಶದಿಂದಲೇ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಕೋರ್ಟ್ ನಲ್ಲಿ ಮನು ಪರ ವಕೀಲರು ಮನವಿ ಮಾಡಿದ್ದಾರೆ.
ಇದೀಗ ಮನು ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿದೆ. ಮಡೆನೂರು ಮನು ಅಭಿನಯದ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಗೆ ಎರಡು ದಿನ ಇರುವಾಗ ರೇಪ್ ಕೇಸ್ ದಾಖಲಾಗಿತ್ತು. ಇದು ದುರುದ್ದೇಶಪೂರ್ವಕವಾಗಿ ದಾಖಲಿಸಿದ ಪ್ರಕರಣ ಎಂದು ವಕೀಲರು ವಾದಿಸಿದ್ದಾರೆ.
ಪ್ರಕರಣ ಸಂಬಂಧ ಮಡೆನೂರು ಮನು ಬಂಧಿತರಾಗಿ ಕೆಲವು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ನಡುವೆ ಅವರು ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಅಡಿಯೋ ವೈರಲ್ ಆಗಿತ್ತು. ಈ ಸಂಬಂಧ ಅವರು ಎಲ್ಲಾ ನಟರ ಕ್ಷಮೆಯನ್ನೂ ಕೇಳಿದ್ದಾರೆ.