ಕ್ಯಾನ್ಸರ್ ಎಂದು ವದಂತಿ: ಸ್ಪಷ್ಟನೆ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ
ಚಿರಂಜೀವಿಗೆ ಕ್ಯಾನ್ಸರ್ ಎಂದು ಸುದ್ದಿ ಹಬ್ಬಿತ್ತು. ಇಂತಹದ್ದೊಂದು ಸುದ್ದಿ ಹರಡುತ್ತಿದ್ದಂತೇ ಮೆಗಾಸ್ಟಾರ್ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಹೀಗಾಗಿ ಕೊನೆಗೆ ಸ್ವತಃ ಚಿರಂಜೀವಿ ತಮ್ಮ ಆರೋಗ್ಯದ ಬಗ್ಗೆ ಮತ್ತು ವದಂತಿ ಹರಡಲು ಕಾರಣವೇನೆಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಕ್ಯಾನ್ಸರ್ ಸೆಂಟರ್ ಉದ್ಘಾಟನೆಯೊಂದರ ವೇಳೆ ನಾನು ನನಗೆ ಈ ಹಿಂದೆ ಕ್ಯಾನ್ಸರ್ ಅಲ್ಲದ ಗಡ್ಡೆಯೊಂದು ಕಾಣಿಸಿಕೊಂಡಿದ್ದರ ಬಗ್ಗೆ ಮಾತನಾಡಿದ್ದೆ. ಅದನ್ನು ತಕ್ಷಣವೇ ತೆಗೆಸಿದ್ದರಿಂದ ನನಗೆ ಕ್ಯಾನ್ಸರ್ ತಗುಲಿರಲಿಲ್ಲ. ಹಾಗಾಗಿ ಮುಂಜಾಗ್ರತೆ ವಹಿಸಿ, ಪರೀಕ್ಷಿಸಿಕೊಳ್ಳಿ ಎಂದಿದ್ದೆ. ಇದರಿಂದಲೇ ನನಗೆ ಕ್ಯಾನ್ಸರ್ ತಗುಲಿದೆ ಎಂದು ಕೆಲವರು ತಪ್ಪಾಗಿ ತಿಳಿದು ವರದಿ ಮಾಡಿದ್ದರು. ಅಂತಹವರಿಗೆ ನನ್ನ ಮನವಿ, ವಿಷಯ ಸ್ಪಷ್ಟವಾಗದೇ ಅಸಂಬದ್ಧವಾಗಿ ಬರೆಯಬೇಡಿ. ಇದರಿಂದ ಅನೇಕರಿಗೆ ಭಯವಾಗುತ್ತದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.